ಎರಡನೇ ಪೂರ್ವಕಾಲವೃತ್ತಾಂತ 30:1-27

  • ಹಿಜ್ಕೀಯ ಪಸ್ಕ ಆಚರಿಸಿದ (1-27)

30  ಹಿಜ್ಕೀಯ ಇಡೀ ಇಸ್ರಾಯೇಲ್‌+ ಮತ್ತು ಯೆಹೂದಕ್ಕೆ ಸಂದೇಶ ಕಳಿಸಿ, ಇಸ್ರಾಯೇಲ್‌ ದೇವರಾದ ಯೆಹೋವನಿಗಾಗಿ ಪಸ್ಕ ಹಬ್ಬ ಆಚರಿಸೋಕೆ+ ಯೆರೂಸಲೇಮಲ್ಲಿ ಯೆಹೋವನ ಆಲಯಕ್ಕೆ ಬರಬೇಕಂತ ಹೇಳಿದ. ಎಫ್ರಾಯೀಮ್‌ ಮತ್ತು ಮನಸ್ಸೆ+ ಪ್ರಾಂತ್ಯಗಳಿಗೆ ಪತ್ರಗಳನ್ನ ಬರೆದ.  ರಾಜ, ಅವನ ಅಧಿಕಾರಿಗಳು ಮತ್ತು ಯೆರೂಸಲೇಮಿನ ಇಡೀ ಸಭೆಯವರು ಎರಡನೇ ತಿಂಗಳಲ್ಲಿ ಪಸ್ಕ ಹಬ್ಬ ಆಚರಿಸೋಕೆ+ ತೀರ್ಮಾನ ಮಾಡಿದ್ರು.  ಅವ್ರಿಗೆ ಮೊದಲನೇ ತಿಂಗಳಲ್ಲಿ ಆ ಹಬ್ಬ ಮಾಡೋಕಾಗಲಿಲ್ಲ.+ ಯಾಕಂದ್ರೆ ತುಂಬ ಪುರೋಹಿತರು ತಮ್ಮನ್ನ ಪವಿತ್ರೀಕರಿಸಲೂ ಇಲ್ಲ,+ ಯೆರೂಸಲೇಮಲ್ಲಿ ಜನ ಕೂಡಿಬರಲೂ ಇಲ್ಲ.  ಈ ಏರ್ಪಾಡು ರಾಜನಿಗೆ ಮತ್ತು ಇಡೀ ಸಭೆಗೆ ಸರಿ ಅನಿಸ್ತು.  ಹಾಗಾಗಿ ಅವರು ಇಸ್ರಾಯೇಲ್‌ ದೇವರಾದ ಯೆಹೋವನಿಗಾಗಿ ಪಸ್ಕ ಹಬ್ಬ ಆಚರಿಸೋಕೆ ಜನ ಯೆರೂಸಲೇಮಿಗೆ ಬರಬೇಕಂತ ಬೇರ್ಷೆಬದಿಂದ ದಾನಿನ+ ತನಕ ಹೀಗೆ ಇಡೀ ಇಸ್ರಾಯೇಲಲ್ಲಿ ಡಂಗುರ ಸಾರೋಕೆ ನಿರ್ಧರಿಸಿದ್ರು. ಯಾಕಂದ್ರೆ ಇದಕ್ಕಿಂತ ಮುಂಚೆ ಸಭೆಯವರೆಲ್ಲ ಸೇರಿ ಈ ಹಬ್ಬವನ್ನ ನಿಯಮ ಪುಸ್ತಕದಲ್ಲಿ ಬರೆದಿರೋ ತರ ಆಚರಿಸಿರಲಿಲ್ಲ.+  ಆಮೇಲೆ ಸಂದೇಶವಾಹಕರು ರಾಜನ ಮತ್ತು ಅಧಿಕಾರಿಗಳ ಪತ್ರಗಳನ್ನ ಇಸ್ರಾಯೇಲಿನ ಮತ್ತು ಯೆಹೂದದ ಎಲ್ಲ ಪ್ರಾಂತ್ಯಗಳಿಗೆ ತಗೊಂಡು ಹೋದ್ರು. ಹೀಗೆ ಮಾಡಬೇಕಂತ ರಾಜ ಅವ್ರಿಗೆ ಆಜ್ಞಾಪಿಸಿದ್ದ. ಅವರು ಹೀಗೆ ಹೇಳ್ತಾ ಹೋದ್ರು “ಇಸ್ರಾಯೇಲ್‌ ಜನ್ರೇ, ಅಬ್ರಹಾಮನ, ಇಸಾಕನ ಮತ್ತು ಇಸ್ರಾಯೇಲನ ದೇವರಾದ ಯೆಹೋವನ ಕಡೆ ವಾಪಸ್‌ ಬನ್ನಿ. ಆಗ ಅಶ್ಶೂರ್ಯರ ರಾಜರ+ ಕೈಯಿಂದ ತಪ್ಪಿಸಿಕೊಂಡು ಬಂದಿರೋ ನಿಮ್ಮ ಹತ್ರ ಆತನೂ ವಾಪಸ್‌ ಬರ್ತಾನೆ.  ನೀವು ನಿಮ್ಮ ಪೂರ್ವಜರ ತರ ಮತ್ತು ಸಹೋದರರ ತರ ಆಗಬೇಡಿ. ಅವರು ತಮ್ಮ ಪೂರ್ವಜರ ದೇವರಾದ ಯೆಹೋವನಿಗೆ ನಂಬಿಕೆದ್ರೋಹ ಮಾಡಿದ್ರು. ಹಾಗಾಗಿ ಆತನು ಅವ್ರ ಮೇಲೆ ನಾಶನ ತಂದನು. ಈಗ ನೀವು ಅದನ್ನ ನಿಮ್ಮ ಕಣ್ಣಾರೆ ನೋಡ್ತಿದ್ದೀರ.+  ನೀವು ನಿಮ್ಮ ಪೂರ್ವಜರ ತರ ಹಠಮಾರಿಗಳು ಆಗಬೇಡಿ.+ ಯೆಹೋವನಿಗೆ ಅಧೀನರಾಗಿ. ಆತನು ಶಾಶ್ವತವಾಗಿ ಪವಿತ್ರಗೊಳಿಸಿರೋ ಆತನ ಆರಾಧನಾ ಸ್ಥಳಕ್ಕೆ ಬಂದು+ ನಿಮ್ಮ ದೇವರಾದ ಯೆಹೋವನನ್ನ ಆರಾಧಿಸಿ. ಆಗ ಆತನ ಕೋಪ ನಿಮ್ಮಿಂದ ದೂರ ಆಗುತ್ತೆ.+  ನೀವು ಯೆಹೋವನ ಹತ್ರ ವಾಪಸ್‌ ಬಂದ್ರೆ ನಿಮ್ಮ ಸಹೋದರರನ್ನ ಮತ್ತು ನಿಮ್ಮ ಮಕ್ಕಳನ್ನ ಹಿಡ್ಕೊಂಡು ಹೋಗಿರುವವರು ಅವ್ರಿಗೆ ಕರುಣೆ ತೋರಿಸಿ+ ಈ ದೇಶಕ್ಕೆ ವಾಪಸ್‌ ಅವ್ರನ್ನ ಬಿಟ್ಟುಬಿಡ್ತಾರೆ.+ ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಕರುಣಾಮಯಿ,* ಕನಿಕರ ತೋರಿಸುವವನು+ ಆಗಿದ್ದಾನೆ. ನೀವು ಆತನ ಹತ್ರ ವಾಪಸ್‌ ಬಂದ್ರೆ ಆತನು ನಿಮ್ಮನ್ನ ತಿರಸ್ಕರಿಸಲ್ಲ.”+ 10  ಸಂದೇಶವಾಹಕರು ಎಫ್ರಾಯೀಮ್‌ ಮತ್ತು ಮನಸ್ಸೆ ಪ್ರದೇಶಗಳಲ್ಲಿದ್ದ+ ಎಲ್ಲ ಪಟ್ಟಣಗಳಿಗೂ ಹೋದ್ರು. ಅವರು ಜೆಬುಲೂನಿಗೂ ಹೋದ್ರು. ಆದರೆ ಜನ ಅವ್ರನ್ನ ನೋಡಿ ಗೇಲಿ ಮಾಡಿ ಅವಹೇಳನ ಮಾಡಿದ್ರು.+ 11  ಹಾಗಿದ್ರೂ ಅಶೇರ್‌, ಮನಸ್ಸೆ ಮತ್ತು ಜೆಬುಲೂನಿನ ಕೆಲವು ಜನ ತಮ್ಮನ್ನ ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದ್ರು.+ 12  ಸತ್ಯ ದೇವರ ಆಶೀರ್ವಾದ ಯೆಹೂದದ ಮೇಲೂ ಇತ್ತು. ಹಾಗಾಗಿ ಅವರು ಯೆಹೋವನ ಮಾತಿನ ಪ್ರಕಾರ ರಾಜ ಮತ್ತು ಅಧಿಕಾರಿಗಳು ಆಜ್ಞಾಪಿಸಿದ್ದನ್ನ ಒಗ್ಗಟ್ಟಿಂದ* ಪಾಲಿಸಿದ್ರು. 13  ಎರಡನೇ ತಿಂಗಳಲ್ಲಿ+ ಹುಳಿಯಿಲ್ಲದ ರೊಟ್ಟಿ ಹಬ್ಬ ಆಚರಿಸೋಕೆ+ ಭಾರಿ ಸಂಖ್ಯೆಯಲ್ಲಿ ಜನ ಯೆರೂಸಲೇಮಿಗೆ ಬಂದ್ರು. ಅದೊಂದು ದೊಡ್ಡ ಗುಂಪಾಗಿತ್ತು. 14  ಅವ್ರೆಲ್ಲ ಯೆರೂಸಲೇಮಲ್ಲಿದ್ದ ಯಜ್ಞವೇದಿಗಳನ್ನ+ ಮತ್ತು ಎಲ್ಲ ಧೂಪವೇದಿಗಳನ್ನ ತೆಗೆದುಹಾಕಿ+ ಅವುಗಳನ್ನ ಕಿದ್ರೋನ್‌ ಕಣಿವೆಗೆ ಎಸಿದುಬಿಟ್ರು. 15  ಆಮೇಲೆ ಅವರು ಎರಡನೇ ತಿಂಗಳ 14ನೇ ದಿನ ಪಸ್ಕದ ಬಲಿಗಾಗಿ ತಂದಿದ್ದ ಪ್ರಾಣಿಯನ್ನ ಕಡಿದ್ರು. ಅದನ್ನ ನೋಡಿ ಪುರೋಹಿತರಿಗೆ ಮತ್ತು ಲೇವಿಯರಿಗೆ ನಾಚಿಕೆ ಆಯ್ತು. ಹಾಗಾಗಿ ಅವರು ತಮ್ಮನ್ನ ಪವಿತ್ರ ಮಾಡ್ಕೊಂಡು ಸರ್ವಾಂಗಹೋಮ ಬಲಿಗಳನ್ನ ಯೆಹೋವನ ಆಲಯಕ್ಕೆ ತಂದ್ರು. 16  ಸತ್ಯ ದೇವರ ಮನುಷ್ಯ ಮೋಶೆಯ ನಿಯಮ ಪುಸ್ತಕದ ಪ್ರಕಾರ ತಮಗೆ ನೇಮಿಸಲಾಗಿದ್ದ ತಮ್ಮತಮ್ಮ ಜಾಗಗಳಲ್ಲಿ ಅವರು ನಿಂತ್ಕೊಂಡ್ರು. ಆಗ ಲೇವಿಯರು ಪ್ರಾಣಿ ರಕ್ತ ತಗೊಂಡು ಬಂದು ಪುರೋಹಿತರಿಗೆ ಕೊಟ್ರು. ಆ ರಕ್ತವನ್ನ ಅವರು ಯಜ್ಞವೇದಿ ಮೇಲೆ ಚಿಮಿಕಿಸಿದ್ರು.+ 17  ಆ ಸಭೆಯಲ್ಲಿ ತಮ್ಮನ್ನ ಪವಿತ್ರ ಮಾಡ್ಕೊಳ್ಳದ ತುಂಬ ಜನ್ರಿದ್ರು. ಅಂಥ ಅಪವಿತ್ರ ಜನ್ರಿಗಾಗಿ ಪಸ್ಕದ ಪ್ರಾಣಿಯನ್ನ ಬಲಿಕೊಡೋ ಮತ್ತು ಆ ಜನ್ರನ್ನ ಯೆಹೋವನಿಗಾಗಿ ಪವಿತ್ರ ಮಾಡೋ ಜವಾಬ್ದಾರಿ ಲೇವಿಯರಿಗಿತ್ತು.+ 18  ತುಂಬ ಜನ ಅದ್ರಲ್ಲೂ ಮುಖ್ಯವಾಗಿ ಎಫ್ರಾಯೀಮ್‌, ಮನಸ್ಸೆ,+ ಇಸ್ಸಾಕಾರ ಮತ್ತು ಜೆಬುಲೂನಿನ ಜನ ತಮ್ಮನ್ನ ಪವಿತ್ರ ಮಾಡ್ಕೊಂಡಿರಲಿಲ್ಲ. ಹಾಗಿದ್ರೂ ಅವರು ನಿಯಮ ಪುಸ್ತಕದಲ್ಲಿ ಬರೆದಿರೋದಕ್ಕೆ ವಿರುದ್ಧವಾಗಿ ಪಸ್ಕ ಹಬ್ಬದ ಭೋಜನ ಮಾಡಿದ್ರು. ಆಗ ಹಿಜ್ಕೀಯ ಅವ್ರಿಗಾಗಿ ಪ್ರಾರ್ಥಿಸ್ತಾ “ಒಳ್ಳೆಯವನಾಗಿರೋ ಯೆಹೋವನೇ,+ ದಯವಿಟ್ಟು ಕ್ಷಮಿಸು. 19  ತಮ್ಮ ಪೂರ್ವಜರ ದೇವರೂ ಸತ್ಯ ದೇವರೂ ಆಗಿರೋ ಯೆಹೋವನನ್ನ ಆರಾಧಿಸೋಕೆ ಯಾರೆಲ್ಲ ತಮ್ಮ ಹೃದಯವನ್ನ ಸಿದ್ಧ ಮಾಡ್ಕೊಂಡಿದ್ದಾರೋ+ ಅವರು ಪವಿತ್ರತೆಯ ನಿಯಮದ ಪ್ರಕಾರ+ ತಮ್ಮನ್ನ ಪವಿತ್ರ ಮಾಡ್ಕೊಳ್ಳದೆ ಇದ್ರೂ ಅವ್ರನ್ನ ಕ್ಷಮಿಸು” ಅಂತ ಬೇಡ್ಕೊಂಡ. 20  ಯೆಹೋವ ಹಿಜ್ಕೀಯನ ಪ್ರಾರ್ಥನೆ ಕೇಳಿಸ್ಕೊಂಡು ಜನ್ರನ್ನ ಕ್ಷಮಿಸಿದನು.* 21  ಯೆರೂಸಲೇಮಲ್ಲಿ ಕೂಡಿಬಂದಿದ್ದ ಇಸ್ರಾಯೇಲ್ಯರು ಹುಳಿಯಿಲ್ಲದ ರೊಟ್ಟಿ ಹಬ್ಬವನ್ನ ಸಂಭ್ರಮದಿಂದ+ ಏಳು ದಿನಗಳ ತನಕ ಆಚರಿಸಿದ್ರು.+ ಲೇವಿಯರೂ ಪುರೋಹಿತರೂ ಪ್ರತಿದಿನ ಯೆಹೋವನಿಗಾಗಿ ತಮ್ಮ ಸಂಗೀತ ಉಪಕರಣಗಳನ್ನ ಜೋರಾಗಿ ನುಡಿಸ್ತಾ ಯೆಹೋವನನ್ನ ಸ್ತುತಿಸ್ತಾ ಇದ್ರು.+ 22  ಅಷ್ಟೇ ಅಲ್ಲ ಯೆಹೋವನ ಸೇವೆ ಮಾಡೋದ್ರಲ್ಲಿ ವಿವೇಚನೆ ತೋರಿಸಿದ ಎಲ್ಲ ಲೇವಿಯರ ಜೊತೆ ಹಿಜ್ಕೀಯ ಹೃದಯ ಮುಟ್ಟೋ ತರ ಮಾತಾಡಿ ಅವ್ರನ್ನ ಉತ್ತೇಜಿಸಿದ. ಅವರು ಆ ಹಬ್ಬದ ಏಳೂ ದಿನ ಊಟಮಾಡಿದ್ರು,+ ಸಮಾಧಾನ ಬಲಿಗಳನ್ನ ಅರ್ಪಿಸಿದ್ರು+ ಮತ್ತು ತಮ್ಮ ಪೂರ್ವಜರ ದೇವರಾದ ಯೆಹೋವನಿಗೆ ಧನ್ಯವಾದ ಹೇಳಿದ್ರು. 23  ಆಮೇಲೆ ಇಡೀ ಸಭೆಯವರು ಹಬ್ಬವನ್ನ ಇನ್ನೂ ಏಳು ದಿನ ಆಚರಿಸಬೇಕಂತ ತೀರ್ಮಾನಿಸಿದ್ರು. ಹಾಗಾಗಿ ಅವರು ಹಬ್ಬವನ್ನ ಇನ್ನೂ ಏಳು ದಿನ ಆಚರಿಸಿ ಸಂಭ್ರಮಿಸಿದ್ರು.+ 24  ಯೆಹೂದದ ರಾಜ ಹಿಜ್ಕೀಯ ಸಭೆಗೆ ಕಾಣಿಕೆಯಾಗಿ 1,000 ಹೋರಿಗಳನ್ನ ಮತ್ತು 7,000 ಕುರಿಗಳನ್ನ ಕೊಟ್ಟ. ಅಧಿಕಾರಿಗಳು ಸಭೆಗೆ ಕಾಣಿಕೆಯಾಗಿ 1,000 ಹೋರಿಗಳನ್ನ ಮತ್ತು 10,000 ಕುರಿಗಳನ್ನ ಕೊಟ್ರು.+ ತುಂಬ ಪುರೋಹಿತರು ಸಹ ತಮ್ಮನ್ನ ಪವಿತ್ರ ಮಾಡ್ಕೊಂಡ್ರು.+ 25  ಎಲ್ಲ ಯೆಹೂದ್ಯರು, ಪುರೋಹಿತರು, ಲೇವಿಯರು, ಇಸ್ರಾಯೇಲಿಂದ ಬಂದಿದ್ದ ಎಲ್ಲ ಜನ,+ ಇಸ್ರಾಯೇಲ್‌ ದೇಶದಿಂದ ಬಂದಿದ್ದ ವಿದೇಶಿಯರು+ ಮತ್ತು ಯೆಹೂದದಲ್ಲಿದ್ದ ವಿದೇಶಿಯರು ಸಂಭ್ರಮಿಸಿದ್ರು. 26  ದಾವೀದನ ಮಗನೂ ಇಸ್ರಾಯೇಲಿನ ರಾಜನೂ ಆಗಿದ್ದ ಸೊಲೊಮೋನನ ದಿನಗಳಿಂದ ಅವತ್ತಿನ ತನಕ ಯೆರೂಸಲೇಮಲ್ಲಿ ಇಷ್ಟು ಸಂಭ್ರಮದಿಂದ ಹಬ್ಬ ಆಚರಿಸಿರಲೇ ಇಲ್ಲ.+ 27  ಕೊನೆಗೆ ಲೇವಿಯರಾದ ಪುರೋಹಿತರು ಎದ್ದು ನಿಂತು ಜನ್ರಿಗೆ ದೇವರ ಆಶೀರ್ವಾದಕ್ಕಾಗಿ ಬೇಡ್ಕೊಂಡ್ರು.+ ದೇವರು ಅವ್ರ ಪ್ರಾರ್ಥನೆಯನ್ನ ಕೇಳಿಸ್ಕೊಂಡನು. ಅವ್ರ ಪ್ರಾರ್ಥನೆ ದೇವರ ಪವಿತ್ರ ನಿವಾಸವಾದ ಸ್ವರ್ಗವನ್ನ ತಲುಪಿತು.

ಪಾದಟಿಪ್ಪಣಿ

ಅಥವಾ “ಕೃಪೆ ಇರುವವನು.”
ಅಕ್ಷ. “ಒಂದೇ ಮನಸ್ಸಿಂದ.”
ಅಕ್ಷ. “ವಾಸಿಮಾಡಿದನು.”