ಎರಡನೇ ಪೂರ್ವಕಾಲವೃತ್ತಾಂತ 32:1-33

  • ಸನ್ಹೇರೀಬನಿಂದ ಯೆರೂಸಲೇಮಿಗೆ ಬೆದರಿಕೆ (1-8)

  • ಸನ್ಹೇರೀಬ ಯೆಹೋವ ದೇವರನ್ನ ಅವಮಾನ ಮಾಡಿದ (9-19)

  • ದೇವದೂತ ಅಶ್ಶೂರ್ಯ ಸೈನ್ಯವನ್ನ ನಾಶ ಮಾಡಿದ (20-23)

  • ಹಿಜ್ಕೀಯನ ಕಾಯಿಲೆ ಮತ್ತು ಅಹಂಕಾರ (24-26)

  • ಹಿಜ್ಕೀಯನ ಸಾಧನೆಗಳು ಮತ್ತು ಮರಣ (27-33)

32  ಹಿಜ್ಕೀಯ ನಂಬಿಗಸ್ತಿಕೆಯಿಂದ+ ಈ ಎಲ್ಲ ಕೆಲಸಗಳನ್ನ ಮಾಡಿ ಮುಗಿಸಿದ ಮೇಲೆ ಅಶ್ಶೂರ್ಯರ ರಾಜ ಸನ್ಹೇರೀಬ ಯೆಹೂದದ ಮೇಲೆ ದಾಳಿ ಮಾಡಿದ. ಭದ್ರ ಕೋಟೆಗಳಿದ್ದ ಪಟ್ಟಣಗಳ ಗೋಡೆಗಳನ್ನ ಒಡೆದು ಅವುಗಳನ್ನ ವಶ ಮಾಡ್ಕೊಬೇಕಂತ ಹೀಗೆ ಮಾಡಿದ.+  ಸನ್ಹೇರೀಬ ಯೆರೂಸಲೇಮಿನ ವಿರುದ್ಧ ಯುದ್ಧ ಮಾಡೋಕೆ ಬಂದಿದ್ದಾನೆ ಅಂತ ಹಿಜ್ಕೀಯನಿಗೆ ಗೊತ್ತಾದಾಗ  ಅವನು ತನ್ನ ಅಧಿಕಾರಿಗಳ ಮತ್ತು ವೀರ ಸೈನಿಕರ ಜೊತೆ ಮಾತಾಡಿ ಪಟ್ಟಣದ ಹೊರಗಿದ್ದ ನೀರಿನ ಬುಗ್ಗೆಗಳನ್ನ ಮುಚ್ಚಿಸೋ ನಿರ್ಧಾರ ಮಾಡಿದ.+ ಅವ್ರೆಲ್ಲ ಅವನಿಗೆ ಬೆಂಬಲ ಕೊಟ್ರು.  ತುಂಬ ಜನ ಒಟ್ಟು ಸೇರಿ ಬಂದು “ಅಶ್ಶೂರ್ಯರ ರಾಜ ಬಂದಾಗ ಅವ್ರಿಗೆ ಸಾಕಷ್ಟು ನೀರು ಸಿಗಬಾರದು” ಅಂತ ಹೇಳ್ತಾ ಎಲ್ಲ ನೀರಿನ ಬುಗ್ಗೆಗಳನ್ನ ಮತ್ತು ದೇಶದಲ್ಲಿ ಹರಿಯೋ ನೀರನ್ನ ನಿಲ್ಲಿಸಿದ್ರು.  ಇದಲ್ಲದೆ ಬಿದ್ದು ಹೋಗಿದ್ದ ಗೋಡೆಯ ಇಡೀ ಭಾಗವನ್ನ ಹಿಜ್ಕೀಯ ಕಟ್ಟಲೇಬೇಕು ಅನ್ನೋ ಉದ್ದೇಶದಿಂದ ಮತ್ತೆ ಕಟ್ಟಿಸಿದ. ಅದ್ರ ಮೇಲೆ ಗೋಪುರಗಳನ್ನ ಏರಿಸಿದ. ಹೊರಭಾಗದಲ್ಲಿ ಇನ್ನೊಂದು ಗೋಡೆ ಕಟ್ಟಿಸಿದ. ದಾವೀದಪಟ್ಟಣದಲ್ಲಿದ್ದ ಮಿಲ್ಲೋ*+ ಕೋಟೆಯ ದುರಸ್ತಿನೂ ಮಾಡಿಸಿದ. ಭಾರಿ ಸಂಖ್ಯೆಯಲ್ಲಿ ಆಯುಧಗಳನ್ನ ಮತ್ತು ಗುರಾಣಿಗಳನ್ನ ಮಾಡಿಸಿದ.  ಆಮೇಲೆ ಅವನು ಜನ್ರ ಮೇಲೆ ಸೇನಾಪತಿಗಳನ್ನ ನೇಮಿಸಿದ. ಅವ್ರನ್ನ ಬಾಗಿಲ ಹತ್ರ ಇದ್ದ ಪಟ್ಟಣದ ಮುಖ್ಯಸ್ಥಳದಲ್ಲಿ* ಒಟ್ಟುಗೂಡಿಸಿದ. ಅವನು ಅವ್ರ ಹೃದಯ ಮುಟ್ಟೋ ತರ ಮಾತಾಡ್ತಾ  “ಧೈರ್ಯವಾಗಿರಿ, ದೃಢವಾಗಿರಿ. ಅಶ್ಶೂರ್ಯರ ರಾಜನಿಗೆ+ ಮತ್ತು ಅವನ ಜೊತೆ ಇರೋ ಜನ್ರ ಗುಂಪಿಗೆ ಹೆದರಬೇಡಿ, ಕಳವಳಪಡಬೇಡಿ. ಅವನ ಜೊತೆ ಇರೋರಿಗಿಂತ ನಮ್ಮ ಜೊತೆ ಇರೋರೇ ಜಾಸ್ತಿ.+  ಅವನ ಜೊತೆ ತೋಳಿನ ಬಲ ಇದೆ.* ಆದ್ರೆ ನಮ್ಮ ಜೊತೆ ನಮ್ಮ ದೇವರಾದ ಯೆಹೋವ ಇದ್ದಾನೆ. ಆತನು ನಮಗೆ ಸಹಾಯ ಮಾಡ್ತಾನೆ ಮತ್ತು ನಮ್ಮ ಪರವಾಗಿ ಯುದ್ಧ ಮಾಡ್ತಾನೆ”+ ಅಂದ. ಯೆಹೂದದ ರಾಜ ಹಿಜ್ಕೀಯನ ಈ ಮಾತು ಕೇಳಿ ಜನ ಬಲಗೊಂಡ್ರು.+  ಇದಾದ ಮೇಲೆ ತನ್ನ ಎಲ್ಲ ಸೈನಿಕರ ಜೊತೆ* ಲಾಕೀಷಲ್ಲಿದ್ದ+ ಅಶ್ಶೂರ್ಯರ ರಾಜ ಸನ್ಹೇರೀಬ ತನ್ನ ಸೇವಕರನ್ನ ಯೆರೂಸಲೇಮಿಗೆ ಕಳಿಸಿದ. ಅವನು ಯೆಹೂದದ ರಾಜ ಹಿಜ್ಕೀಯನ ಹತ್ರ ಮತ್ತು ಯೆರೂಸಲೇಮಲ್ಲಿರೋ ಎಲ್ಲ ಯೆಹೂದ್ಯರ ಹತ್ರ+ ಒಂದು ಸಂದೇಶ ಕಳಿಸಿದ. ಅದೇನಂದ್ರೆ 10  “ಅಶ್ಶೂರ್ಯರ ರಾಜ ಸನ್ಹೇರೀಬ ಹೇಳ್ತಿರೋದು ಏನಂದ್ರೆ ‘ಯೆರೂಸಲೇಮಿಗೆ ಮುತ್ತಿಗೆ ಹಾಕಿದ್ರೂ ಯಾವ ಭರವಸೆಯ ಮೇಲೆ ನೀವು ಇನ್ನೂ ಇಲ್ಲೇ ಇರ್ತಿರ?+ 11  “ಅಶ್ಶೂರ್ಯರ ರಾಜನ ಕೈಯಿಂದ ನಮ್ಮ ದೇವರಾದ ಯೆಹೋವ ನಮ್ಮನ್ನ ಕಾಪಾಡ್ತಾನೆ” ಅಂತ ಹಿಜ್ಕೀಯ ನಿಮ್ಮನ್ನ ದಾರಿ ತಪ್ಪಿಸ್ತಿದ್ದಾನಲ್ವಾ? ಆಹಾರ ಇಲ್ಲದೆ ನೀರಿಲ್ಲದೆ ನೀವು ಸಾಯಬೇಕು ಅಂತ ಹೀಗೆ ಮಾಡ್ತಿದ್ದಾನಲ್ವಾ?+ 12  ನಿಮ್ಮ ದೇವರ* ದೇವಸ್ಥಾನಗಳನ್ನ+ ಮತ್ತು ಆತನ ಯಜ್ಞವೇದಿಗಳನ್ನ+ ಕೆಡವಿಹಾಕಿ ಯೆಹೂದ ಮತ್ತು ಯೆರೂಸಲೇಮಿನ ಜನ್ರಿಗೆ “ನೀವು ಒಂದೇ ಒಂದು ಯಜ್ಞವೇದಿ ಮುಂದೆ ಬಗ್ಗಿ ನಮಸ್ಕರಿಸಬೇಕು ಮತ್ತು ಅದ್ರ ಮೇಲೆ ನಿಮ್ಮ ಬಲಿಗಳನ್ನ ಅರ್ಪಿಸಿ ಅದ್ರ ಹೊಗೆ ಮೇಲೆ ಏರೋ ತರ ಮಾಡ್ಬೇಕು” ಅಂತ ಹೇಳಿದವನು ಇದೇ ಹಿಜ್ಕೀಯ ಅಲ್ವಾ?+ 13  ನಾನು ಮತ್ತು ನನ್ನ ಪೂರ್ವಜರು ಬೇರೆ ದೇಶದ ಜನ್ರಿಗೆ ಯಾವ ಗತಿ ತಂದಿದ್ದೀವಿ ಅಂತ ನಿಮಗೆ ಗೊತ್ತಿಲ್ವಾ?+ ಅವ್ರ ದೇವರುಗಳಿಗೆ ಅವ್ರ ದೇಶವನ್ನ ನನ್ನ ಕೈಯಿಂದ ಬಿಡಿಸ್ಕೊಳ್ಳೋಕೆ ಆಯ್ತಾ?+ 14  ನನ್ನ ಪೂರ್ವಜರು ನಾಶಮಾಡಿದ ಜನಾಂಗಗಳ ಯಾವ ದೇವರಿಗೂ ತಮ್ಮ ಜನ್ರನ್ನ ನನ್ನ ಕೈಯಿಂದ ರಕ್ಷಿಸೋಕೆ ಆಗಲಿಲ್ಲ. ಅಂದ್ಮೇಲೆ ನಿಮ್ಮ ದೇವರು ನನ್ನ ಕೈಯಿಂದ ನಿಮ್ಮನ್ನ ಹೇಗೆ ತಾನೇ ರಕ್ಷಿಸ್ತಾನೆ?+ 15  ಹಿಜ್ಕೀಯ ನಿಮಗೆ ಮೋಸ ಮಾಡೋಕೆ ಬಿಡಬೇಡಿ. ಅವನನ್ನ ನಂಬಬೇಡಿ.+ ಅವನ ಮಾತಿಗೆ ಮರುಳಾಗಬೇಡಿ. ಯಾವ ದೇಶದ ದೇವರಿಗಾಗಲಿ ಯಾವ ಸಾಮ್ರಾಜ್ಯದ ದೇವರಿಗಾಗಲಿ ತನ್ನ ಜನ್ರನ್ನ ನನ್ನ ಕೈಯಿಂದ ಮತ್ತು ನನ್ನ ಪೂರ್ವಜರ ಕೈಯಿಂದ ರಕ್ಷಿಸೋಕೆ ಆಗಲ್ಲ. ಹಾಗಿರುವಾಗ ನಿಮ್ಮ ದೇವರು ನಿಮ್ಮನ್ನ ನನ್ನ ಕೈಯಿಂದ ಹೇಗೆ ತಾನೇ ರಕ್ಷಿಸ್ತಾನೆ?’”+ ಅಂದ. 16  ಸನ್ಹೇರೀಬನ ಸೇವಕರು ಸತ್ಯ ದೇವರಾದ ಯೆಹೋವನನ್ನ ಮತ್ತು ಆತನ ಸೇವಕ ಹಿಜ್ಕೀಯನನ್ನ ಅಪಹಾಸ್ಯ ಮಾಡ್ತಾನೇ ಇದ್ರು. 17  ಸನ್ಹೇರೀಬ ಇಸ್ರಾಯೇಲ್‌ ದೇವರಾದ ಯೆಹೋವನನ್ನ ನಿಂದಿಸೋಕೆ+ ಪತ್ರಗಳನ್ನೂ ಬರೆದ.+ ಅದ್ರಲ್ಲಿ ಹೀಗಿತ್ತು “ನನ್ನ ಕೈಯಿಂದ ಬೇರೆ ದೇಶಗಳ ಜನ್ರ ದೇವರುಗಳು ತಮ್ಮ ಜನ್ರನ್ನ ಹೇಗೆ ರಕ್ಷಿಸೋಕೆ ಆಗ್ಲಿಲ್ವೋ+ ಹಾಗೇ ಹಿಜ್ಕೀಯನ ದೇವರಿಗೂ ತನ್ನ ಜನ್ರನ್ನ ನನ್ನ ಕೈಯಿಂದ ರಕ್ಷಿಸೋಕಾಗಲ್ಲ.” 18  ಗೋಡೆ ಮೇಲೆ ನಿಂತಿದ್ದ ಯೆರೂಸಲೇಮಿನ ಜನ್ರ ಜೊತೆ ಸನ್ಹೇರೀಬನ ಸೇವಕರು ಗಟ್ಟಿಯಾಗಿ ಯೂದಾಯ ಭಾಷೆಯಲ್ಲಿ ಮಾತಾಡ್ತಿದ್ರು. ಅವ್ರನ್ನ ಹೆದರಿಸೋಕೆ, ಕಳವಳಪಡಿಸೋಕೆ ಮತ್ತು ಆ ಪಟ್ಟಣವನ್ನ ವಶ ಮಾಡ್ಕೊಳ್ಳೋಕೆ ಹೀಗೆ ಮಾಡ್ತಿದ್ರು.+ 19  ಮನುಷ್ಯನ ಕೈಕೆಲಸವಾದ ದೇವರುಗಳ ಅಂದ್ರೆ ಭೂಮಿಯ ಮೇಲಿನ ಬೇರೆ ಜನ್ರ ದೇವರುಗಳ ವಿರುದ್ಧ ಮಾತಾಡಿದ ಹಾಗೇ ಯೆರೂಸಲೇಮಿನ ದೇವರ ವಿರುದ್ಧನೂ ಮಾತಾಡಿದ್ರು. 20  ಆದ್ರೆ ಈ ವಿಷ್ಯದ ಬಗ್ಗೆ ರಾಜ ಹಿಜ್ಕೀಯ ಮತ್ತು ಆಮೋಚನ ಮಗನಾದ ಪ್ರವಾದಿ ಯೆಶಾಯ+ ಪ್ರಾರ್ಥಿಸ್ತಾನೇ ಇದ್ರು. ಸಹಾಯಕ್ಕಾಗಿ ಸ್ವರ್ಗದಲ್ಲಿದ್ದ ದೇವರಿಗೆ ಮೊರೆಯಿಡ್ತಾನೇ ಇದ್ರು.+ 21  ಆಗ ಯೆಹೋವ ಒಬ್ಬ ದೇವದೂತನನ್ನ ಕಳಿಸಿ ಅಶ್ಶೂರ್ಯರ ರಾಜನ ಪಾಳೆಯದಲ್ಲಿದ್ದ ಪ್ರತಿಯೊಬ್ಬ ವೀರ ಸೈನಿಕನನ್ನ,+ ನಾಯಕನನ್ನ, ಪ್ರಧಾನನನ್ನ ಸಂಹರಿಸಿದನು. ಇದ್ರ ಪರಿಣಾಮವಾಗಿ ಅಶ್ಶೂರ್ಯರ ರಾಜ ಸನ್ಹೇರೀಬ ಅವಮಾನ ಅನುಭವಿಸಿ ತನ್ನ ದೇಶಕ್ಕೆ ವಾಪಸ್‌ ಹೋಗಬೇಕಾಯ್ತು. ಅವನು ತನ್ನ ದೇವರ ಆಲಯಕ್ಕೆ ಹೋದ. ಅಲ್ಲಿ ಅವನನ್ನ ಅವನ ಸ್ವಂತ ಮಕ್ಕಳೇ ಕತ್ತಿಯಿಂದ ಸಾಯಿಸಿದ್ರು.+ 22  ಹೀಗೆ ಯೆಹೋವ ಹಿಜ್ಕೀಯನನ್ನ ಮತ್ತು ಯೆರೂಸಲೇಮಿನ ಜನ್ರನ್ನ ಅಶ್ಶೂರ್ಯರ ರಾಜ ಸನ್ಹೇರೀಬನ ಕೈಯಿಂದ ಮತ್ತು ಬೇರೆಲ್ಲರ ಕೈಯಿಂದ ರಕ್ಷಿಸಿದನು. ನಾಲ್ಕೂ ಕಡೆಗಳಲ್ಲಿದ್ದ ಶತ್ರುಗಳಿಂದ ಅವ್ರನ್ನ ಬಿಡಿಸಿ ಅವ್ರಿಗೆ ಶಾಂತಿ ಸಮಾಧಾನ ಕೊಟ್ಟನು. 23  ತುಂಬ ಜನ ಯೆಹೋವನಿಗಾಗಿ ಉಡುಗೊರೆಗಳನ್ನ ತಗೊಂಡು ಯೆರೂಸಲೇಮಿಗೆ ಬಂದ್ರು. ಯೆಹೂದದ ರಾಜ ಹಿಜ್ಕೀಯನಿಗೂ ಶ್ರೇಷ್ಠವಾದ ವಸ್ತುಗಳನ್ನ ತಗೊಂಡು ಬಂದ್ರು.+ ಅವತ್ತಿಂದ ಎಲ್ಲ ಜನಾಂಗದವರು ಅವನಿಗೆ ತುಂಬ ಗೌರವ ಕೊಡೋಕೆ ಶುರುಮಾಡಿದ್ರು. 24  ಆ ಕಾಲದಲ್ಲಿ ಹಿಜ್ಕೀಯ ಅಸ್ವಸ್ಥನಾಗಿ ಸಾಯೋ ಸ್ಥಿತಿಗೆ ಬಂದಾಗ ಯೆಹೋವನಿಗೆ ಪ್ರಾರ್ಥಿಸಿದ.+ ದೇವರು ಅವನ ಪ್ರಾರ್ಥನೆಗೆ ಉತ್ತರವಾಗಿ ಒಂದು ಗುರುತನ್ನ* ಕೊಟ್ಟನು.+ 25  ಆದ್ರೆ ಹಿಜ್ಕೀಯ ತನಗಾದ ಒಳ್ಳೇ ವಿಷ್ಯಗಳ ಕಡೆ ಗಣ್ಯತೆ ತೋರಿಸಲಿಲ್ಲ. ಯಾಕಂದ್ರೆ ಅವನ ಹೃದಯದಲ್ಲಿ ಅಹಂಕಾರ ಹುಟ್ಕೊಂಡಿತ್ತು. ಹಾಗಾಗಿ ದೇವರಿಗೆ ಅವನ ಮೇಲೆ, ಯೆಹೂದ ಮತ್ತು ಯೆರೂಸಲೇಮಿನ ಮೇಲೆ ತುಂಬ ಕೋಪ ಬಂತು. 26  ಆದ್ರೆ ಹಿಜ್ಕೀಯ ತನ್ನ ಹೃದಯದ ಅಹಂಕಾರವನ್ನ ಬಿಟ್ಟು ತನ್ನನ್ನೇ ತಗ್ಗಿಸ್ಕೊಂಡ.+ ಯೆರೂಸಲೇಮಿನ ಜನ್ರೂ ತಮ್ಮನ್ನ ತಗ್ಗಿಸ್ಕೊಂಡ್ರು. ಹಾಗಾಗಿ ಹಿಜ್ಕೀಯನ ದಿನಗಳಲ್ಲಿ ಯೆಹೋವನ ಕೋಪ ಅವ್ರ ಮೇಲೆ ಬರಲಿಲ್ಲ.+ 27  ಹಿಜ್ಕೀಯ ತುಂಬ ಸಿರಿಸಂಪತ್ತನ್ನ ಮತ್ತು ಘನತೆಯನ್ನ ಸಂಪಾದಿಸಿದ.+ ಅವನು ಬೆಳ್ಳಿಯನ್ನ, ಚಿನ್ನವನ್ನ, ಬೆಲೆಬಾಳೋ ರತ್ನಗಳನ್ನ, ಸುಗಂಧ ತೈಲವನ್ನ, ಗುರಾಣಿಗಳನ್ನ ಮತ್ತು ಅಮೂಲ್ಯ ವಸ್ತುಗಳನ್ನೆಲ್ಲ ಇಡೋಕೆ ತನಗಾಗಿ ಕಣಜಗಳನ್ನ+ ಮಾಡಿಸಿದ. 28  ಧಾನ್ಯಗಳಿಗಾಗಿ, ಹೊಸ ದ್ರಾಕ್ಷಾಮದ್ಯಕ್ಕಾಗಿ ಮತ್ತು ಎಣ್ಣೆಗಾಗಿ ಸಹ ಅವನು ಕಣಜಗಳನ್ನ ಮಾಡಿಸಿದ. ಜೊತೆಗೆ ಬೇರೆಬೇರೆ ರೀತಿಯ ಪ್ರಾಣಿಗಳಿಗಾಗಿ ಮತ್ತು ಕುರಿಹಿಂಡುಗಳಿಗಾಗಿ ಕೊಟ್ಟಿಗೆಗಳನ್ನ ಮಾಡಿಸಿದ. 29  ಅವನು ತನಗೋಸ್ಕರ ಪಟ್ಟಣಗಳನ್ನೂ ವಶ ಮಾಡ್ಕೊಂಡ. ಲೆಕ್ಕ ಇಲ್ಲದಷ್ಟು ಪ್ರಾಣಿಗಳನ್ನ ಮತ್ತು ದನಕುರಿಗಳನ್ನ ಸಂಗ್ರಹಿಸಿದ. ಯಾಕಂದ್ರೆ ದೇವರು ಅವನಿಗೆ ಸಾಕಷ್ಟು ಸಂಪತ್ತನ್ನ ಕೊಟ್ಟನು. 30  ಗೀಹೋನ್‌+ ನದಿ ಮೇಲಿನ ನೀರಿನ ಬುಗ್ಗೆಗೆ+ ಕಟ್ಟೆ ಕಟ್ಟಿಸಿ ಅದನ್ನ ದಾವೀದಪಟ್ಟಣದ+ ಪಶ್ಚಿಮಕ್ಕೆ ಹರಿಯೋ ತರ ಮಾಡಿದವನು ಹಿಜ್ಕೀಯನೇ. ಅವನು ಮಾಡಿದ ಎಲ್ಲ ಕೆಲಸದಲ್ಲಿ ಅವನಿಗೆ ಯಶಸ್ಸು ಸಿಕ್ತು. 31  ಒಂದು ಸಲ ಬಾಬೆಲಿನ ಅಧಿಕಾರಿಗಳು ತಮ್ಮ ಪ್ರತಿನಿಧಿಗಳನ್ನ ಹಿಜ್ಕೀಯನ ದೇಶದಲ್ಲಿ ಕಾಣಿಸಿದ ಗುರುತಿನ*+ ಬಗ್ಗೆ ಕೇಳ್ಕೊಂಡು ಬರೋಕೆ ಅವನ ಹತ್ರ ಕಳಿಸಿದ್ರು.+ ಆಗ ಹಿಜ್ಕೀಯನ ಹೃದಯದಲ್ಲಿ ಇರೋದನ್ನ ಪರೀಕ್ಷಿಸಿ ನೋಡೋಕೆ+ ಸತ್ಯ ದೇವರು ಅವನನ್ನ ಏಕಾಂಗಿಯಾಗಿ ಬಿಟ್ಟುಬಿಟ್ಟ.+ 32  ಹಿಜ್ಕೀಯನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಪ್ರೀತಿಯಿಂದ ಮಾಡಿದ ಎಲ್ಲ ಕೆಲಸಗಳ+ ಬಗ್ಗೆ ಆಮೋಚನ ಮಗನಾದ ಪ್ರವಾದಿ ಯೆಶಾಯನ ದರ್ಶನದ ಗ್ರಂಥದಲ್ಲಿ,+ ಯೆಹೂದದ ಮತ್ತು ಇಸ್ರಾಯೇಲ್‌ ರಾಜರ ಕಾಲದ ಪುಸ್ತಕದಲ್ಲಿ ಬರೆಯಲಾಗಿದೆ.+ 33  ಕೊನೆಗೆ ಹಿಜ್ಕೀಯ ತೀರಿಹೋದ. ಯೆಹೂದ ಮತ್ತು ಯೆರೂಸಲೇಮಿನ ಜನ ಗೌರವದಿಂದ ಅವನ ಅಂತ್ಯಕ್ರಿಯೆ ಮಾಡಿದ್ರು. ದಾವೀದನ ಮಕ್ಕಳ ಸಮಾಧಿಗೆ ಹತ್ತಿ ಹೋಗೋ ದಾರಿಯಲ್ಲಿ ಅವನನ್ನ ಹೂಣಿಟ್ರು.+ ಅವನ ನಂತ್ರ ಅವನ ಮಗ ಮನಸ್ಸೆ ರಾಜನಾದ.

ಪಾದಟಿಪ್ಪಣಿ

ಅಥವಾ “ದಿಬ್ಬ.” ಹೀಬ್ರು ಪದದ ಅರ್ಥ ತುಂಬಿಸು.
ಅಥವಾ “ಜನ ಬಲವಿದೆ.”
ಅಥವಾ “ತನ್ನ ಪೂರ್ತಿ ವೈಭವದಿಂದ.”
ಅಕ್ಷ. “ಅವನ.”
ಅಥವಾ “ಮುನ್ಸೂಚನೆ.”
ಅಥವಾ “ಮುನ್ಸೂಚನೆ.”