ಎರಡನೇ ಪೂರ್ವಕಾಲವೃತ್ತಾಂತ 7:1-22

  • ಇಡೀ ಆಲಯ ಯೆಹೋವನ ಮಹಿಮೆಯಿಂದ ತುಂಬಿತು (1-3)

  • ಉದ್ಘಾಟನಾ ಸಮಾರಂಭ (4-10)

  • ಯೆಹೋವ ಸೊಲೊಮೋನನಿಗೆ ಕಾಣಿಸ್ಕೊಂಡನು (11-22)

7  ಸೊಲೊಮೋನ ಪ್ರಾರ್ಥಿಸಿದ ಮೇಲೆ+ ಆಕಾಶದಿಂದ ಬೆಂಕಿ ಬಂದು+ ಸರ್ವಾಂಗಹೋಮ ಬಲಿಗಳನ್ನ ಮತ್ತು ಬೇರೆ ಬಲಿಗಳನ್ನ ಸುಟ್ಟುಬಿಡ್ತು. ಯೆಹೋವನ ಮಹಿಮೆ ಆಲಯನ ತುಂಬಿಕೊಳ್ತು.+  ಯೆಹೋವನ ಮಹಿಮೆ ಯೆಹೋವನ ಆಲಯವನ್ನ ತುಂಬಿಕೊಂಡಿದ್ರಿಂದ ಪುರೋಹಿತರಿಗೆ ಯೆಹೋವನ ಆಲಯದ ಒಳಗೆ ಹೋಗೋಕೆ ಆಗಲಿಲ್ಲ.+  ಬೆಂಕಿ ಆಕಾಶದಿಂದ ಬಂದಿದ್ದನ್ನ ಮತ್ತು ಯೆಹೋವನ ಮಹಿಮೆ ಆಲಯನ ತುಂಬಿದ್ದನ್ನ ಎಲ್ಲ ಇಸ್ರಾಯೇಲ್ಯರು ನೋಡಿದ್ರು. ಆಗ ಅವರು ಮೊಣಕಾಲೂರಿ ನೆಲದ ತನಕ ಬಗ್ಗಿ ಯೆಹೋವನಿಗೆ ನಮಸ್ಕರಿಸಿದ್ರು. “ಯಾಕಂದ್ರೆ ಆತನು ಒಳ್ಳೆಯವನು. ಆತನ ಪ್ರೀತಿ ಶಾಶ್ವತ” ಅಂತ ಹೇಳಿ ಆತನಿಗೆ ಕೃತಜ್ಞತೆ ಹೇಳಿದ್ರು.  ಆಮೇಲೆ ರಾಜ ಮತ್ತು ಎಲ್ಲ ಜನ್ರು ಯೆಹೋವನ ಮುಂದೆ ಬಲಿಗಳನ್ನ ಕೊಟ್ರು.+  ರಾಜ ಸೊಲೊಮೋನ 22,000 ಹೋರಿಗಳನ್ನ ಮತ್ತು 1,20,000 ಕುರಿಗಳನ್ನ ಬಲಿಯಾಗಿ ಕೊಟ್ಟ. ಹೀಗೆ ರಾಜ ಮತ್ತು ಜನ್ರೆಲ್ರೂ ಸತ್ಯ ದೇವರ ಆಲಯನ ಉದ್ಘಾಟನೆ ಮಾಡಿದ್ರು.+  ಪುರೋಹಿತರು ತಮ್ಮನ್ನ ನೇಮಿಸಿದ್ದ ಸ್ಥಾನದಲ್ಲಿ ನಿಂತ್ಕೊಂಡಿದ್ರು. ಯೆಹೋವನಿಗಾಗಿ ಹಾಡುವಾಗ ಬಳಸೋ ಸಂಗೀತ ವಾದ್ಯಗಳನ್ನ ಹಿಡ್ಕೊಂಡು ಲೇವಿಯರೂ ಹಾಗೇ ನಿಂತಿದ್ರು.+ (ರಾಜ ದಾವೀದ “ಆತನ ಪ್ರೀತಿ ಶಾಶ್ವತ” ಅಂತ ಅವ್ರ ಜೊತೆ* ಹಾಡ್ತಾ ಯೆಹೋವನಿಗೆ ಧನ್ಯವಾದ ಹೇಳೋಕೆ ಈ ಸಂಗೀತ ವಾದ್ಯಗಳನ್ನ ತಯಾರಿಸಿದ್ದ.) ಅವ್ರ ಮುಂದೆ ಪುರೋಹಿತರು ಜೋರಾಗಿ ತುತ್ತೂರಿ ಊದುತ್ತಿದ್ರು.+ ಆಗ ಎಲ್ಲ ಇಸ್ರಾಯೇಲ್ಯರು ನಿಂತುಕೊಂಡಿದ್ರು.  ಯೆಹೋವನ ಆಲಯದ ಮುಂದೆ ಇದ್ದ ಅಂಗಳದ ಮಧ್ಯ ಸರ್ವಾಂಗಹೋಮ ಬಲಿಗಳನ್ನ+ ಮತ್ತು ಸಮಾಧಾನ ಬಲಿಗಳ ಕೊಬ್ಬಿದ ಭಾಗಗಳನ್ನ ಕೊಡೋಕೆ ಸೊಲೊಮೋನ ಆ ಜಾಗನ ಪವಿತ್ರ ಮಾಡಿದ್ದ. ಯಾಕಂದ್ರೆ ಸೊಲೊಮೋನ ಮಾಡಿಸಿದ್ದ ತಾಮ್ರದ ಯಜ್ಞವೇದಿಯಲ್ಲಿ+ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ+ ಮತ್ತು ಕೊಬ್ಬಿದ ಭಾಗಗಳು+ ಹಿಡಿಸ್ತಿರಲಿಲ್ಲ.  ಸೊಲೊಮೋನ ಎಲ್ಲ ಇಸ್ರಾಯೇಲ್ಯರ ಜೊತೆ ಸೇರಿ ಏಳು ದಿನದ ತನಕ ಹಬ್ಬ ಮಾಡಿದ.+ ಲೆಬೊ-ಹಾಮಾತಿನಿಂದ* ಈಜಿಪ್ಟಿನ ನಾಲೆ*+ ತನಕ ಇದ್ದ ಎಲ್ಲ ಜನ್ರು ಅಲ್ಲಿದ್ರು.  ಅವರು ಯಜ್ಞವೇದಿಯ ಉದ್ಘಾಟನೆ ಮತ್ತು ಹಬ್ಬನ ಏಳು ದಿನದ ತನಕ ಮಾಡಿದ್ರಿಂದ ಎಂಟನೇ ದಿನದಲ್ಲಿ* ಒಂದು ಪವಿತ್ರ ಸಮ್ಮೇಳನ ಇಟ್ಕೊಂಡ್ರು.+ 10  ಆಮೇಲೆ ಏಳನೇ ತಿಂಗಳಿನ 23ನೇ ದಿನ ಸೊಲೊಮೋನ ಜನ್ರನ್ನ ತಮ್ಮತಮ್ಮ ಮನೆಗೆ ಕಳಿಸಿಕೊಟ್ಟ. ಯೆಹೋವ ದಾವೀದನಿಗೆ, ಸೊಲೊಮೋನನಿಗೆ ಮತ್ತು ತನ್ನ ಜನ್ರಾದ ಇಸ್ರಾಯೇಲ್ಯರ ಕಡೆ ತೋರಿಸಿದ ಒಳ್ಳೇತನ ನೋಡಿ ಅವರು ಸಂತೋಷಪಟ್ರು.+ ಅವ್ರೆಲ್ಲ ಖುಷಿಖುಷಿಯಾಗಿ ತಮ್ಮತಮ್ಮ ಮನೆಗೆ ವಾಪಸ್‌ ಹೋದ್ರು.+ 11  ಹೀಗೆ ಸೊಲೊಮೋನ ಯೆಹೋವನ ಆಲಯವನ್ನ ಮತ್ತು ತನ್ನ ಅರಮನೆಯನ್ನ ಕಟ್ಟಿಮುಗಿಸಿದ.+ ಯೆಹೋವನ ಆಲಯಕ್ಕಾಗಿ ಮತ್ತು ತನ್ನ ಅರಮನೆಗಾಗಿ ಏನೆಲ್ಲ ಮಾಡಬೇಕು ಅಂದ್ಕೊಂಡಿದ್ದನೋ ಅದನ್ನೆಲ್ಲ ಸೊಲೊಮೋನ ಯಶಸ್ವಿಕರವಾಗಿ ಮಾಡಿಮುಗಿಸಿದ.+ 12  ರಾತ್ರಿಹೊತ್ತಲ್ಲಿ ಯೆಹೋವ ಸೊಲೊಮೋನನಿಗೆ ಕಾಣಿಸ್ಕೊಂಡು+ ಹೀಗಂದನು “ನಾನು ನಿನ್ನ ಪ್ರಾರ್ಥನೆ ಕೇಳಿಸ್ಕೊಂಡೆ. ನಾನು ಈ ಜಾಗನ ನನಗೋಸ್ಕರ ಬಲಿ ಅರ್ಪಿಸೋ ಆಲಯವನ್ನಾಗಿ ಆರಿಸ್ಕೊಂಡಿದ್ದೀನಿ.+ 13  ನಾನು ಆಕಾಶವನ್ನು ಮುಚ್ಚಿ ಮಳೆಯಾಗದ ಹಾಗೆ ಮಾಡಿದಾಗ, ದೇಶನ ಹಾಳುಮಾಡೋಕೆ ಮಿಡತೆಗಳಿಗೆ ಆಜ್ಞೆ ಕೊಟ್ಟಾಗ ಮತ್ತು ನನ್ನ ಜನ್ರಿಗೆ ಅಂಟುರೋಗ ಬರೋ ಹಾಗೆ ಮಾಡಿದಾಗ, 14  ಒಂದುವೇಳೆ ನನ್ನ ಹೆಸ್ರಿರೋ ಜನ್ರು+ ತಮ್ಮನ್ನ ತಗ್ಗಿಸಿಕೊಂಡ್ರೆ,+ ಪ್ರಾರ್ಥಿಸಿ ನನ್ನನ್ನ ಹುಡುಕಿದ್ರೆ ಮತ್ತು ಕೆಟ್ಟ ದಾರಿನ ಬಿಟ್ಟು ತಿರುಗಿಕೊಂಡ್ರೆ+ ನಾನು ಸ್ವರ್ಗದಿಂದ ಅವ್ರ ಪ್ರಾರ್ಥನೆನ ಕೇಳಿಸಿಕೊಂಡು ಅವ್ರ ಪಾಪಗಳನ್ನ ಕ್ಷಮಿಸ್ತೀನಿ, ಅವ್ರ ದೇಶನ ಉದ್ಧಾರ ಮಾಡ್ತೀನಿ.+ 15  ಇವತ್ತಿಂದ ಈ ಜಾಗಕ್ಕೆ ಬಂದು ಯಾರು ಪ್ರಾರ್ಥಿಸ್ತಾರೋ ಅವ್ರ ಪ್ರಾರ್ಥನೆನ ನಾನು ಗಮನಕೊಟ್ಟು ಕೇಳಿಸಿಕೊಳ್ತೀನಿ ಮತ್ತು ಅವ್ರನ್ನ ನೋಡ್ತೀನಿ.+ 16  ನನ್ನ ಹೆಸ್ರು ಈ ಆಲಯದಲ್ಲಿ ಶಾಶ್ವತವಾಗಿ ಇರೋಕೆ ನಾನು ಇದನ್ನ ಆರಿಸಿಕೊಂಡಿದ್ದೀನಿ+ ಮತ್ತು ಪವಿತ್ರ ಮಾಡಿದ್ದೀನಿ. ನಾನು ಈ ಆಲಯವನ್ನ ಯಾವಾಗ್ಲೂ ನೋಡ್ಕೊಳ್ತೀನಿ ಮತ್ತು ಜೋಪಾನ ಮಾಡ್ತೀನಿ.+ 17  ನಾನು ನಿನಗೆ ಕೊಟ್ಟ ಎಲ್ಲ ಆಜ್ಞೆನ ಪಾಲಿಸ್ತಾ, ನನ್ನ ನಿಯಮಗಳನ್ನ ಮತ್ತು ನನ್ನ ತೀರ್ಪುಗಳನ್ನ ಕೇಳಿ ನಿನ್ನ ಅಪ್ಪ ದಾವೀದನ ತರ ನಡಕೊಂಡ್ರೆ,+ 18  ನಾನು ನಿನ್ನ ರಾಜ ಸಿಂಹಾಸನನ ಯಾವಾಗ್ಲೂ ಇರೋ ತರ ಮಾಡ್ತೀನಿ.+ ನಾನು ನಿನ್ನ ಅಪ್ಪ ದಾವೀದಗೆ ‘ಇಸ್ರಾಯೇಲಿನ ಸಿಂಹಾಸನದ ಮೇಲೆ ಕೂತ್ಕೊಳ್ಳೋಕೆ ನಿನ್ನ ವಂಶದವ್ರಲ್ಲಿ ಯಾವಾಗ್ಲೂ ಒಬ್ಬ ಇದ್ದೇ ಇರ್ತಾನೆ’+ ಅಂತ ಮಾತುಕೊಟ್ಟಿದ್ದೆ. ಅದನ್ನ ನಿಜ ಮಾಡ್ತೀನಿ.+ 19  ಒಂದುವೇಳೆ ನೀನು ನನ್ನನ್ನ ಹಿಂಬಾಲಿಸದೆ, ನಾನು ನಿನಗೆ ಕೊಟ್ಟಿರೋ ನಿಯಮಗಳನ್ನ, ಆಜ್ಞೆಗಳನ್ನ ಪಾಲಿಸದೆ ಬೇರೆ ದೇವರುಗಳನ್ನ ಆರಾಧಿಸಿ ಅಡ್ಡಬಿದ್ರೆ,+ 20  ನಾನು ಇಸ್ರಾಯೇಲ್ಯರಿಗೆ ಕೊಟ್ಟ ನನ್ನ ದೇಶದಿಂದ ಅವ್ರನ್ನ ಅಳಿಸಿಹಾಕ್ತೀನಿ.+ ನನ್ನ ಹೆಸ್ರಿಗಾಗಿ ನಾನು ಪವಿತ್ರ ಮಾಡಿದ ಆಲಯನ ನನ್ನ ಕಣ್ಮುಂದಿನಿಂದ ದೂರ ತಳ್ಳಿಬಿಡ್ತೀನಿ. ಆಗ ಬೇರೆ ಜನ್ರು ಇಸ್ರಾಯೇಲ್ಯರನ್ನ ನೋಡಿ ತಮಾಷೆ ಮಾಡ್ತಾರೆ, ಅವರು ನಾಶ ಆಗೋದನ್ನ ನೋಡಿ ನಗ್ತಾರೆ.+ 21  ಈ ಆಲಯ ಹಾಳು ಕುಪ್ಪೆ ಆಗುತ್ತೆ. ಇದ್ರ ಮುಂದೆ ಹಾದು ಹೋಗೋರೆಲ್ಲ ಇದನ್ನ ಆಶ್ಚರ್ಯದಿಂದ ನೋಡಿ+ ‘ಯೆಹೋವ ಈ ದೇಶಕ್ಕೂ ಈ ಆಲಯಕ್ಕೂ ಎಂಥ ಗತಿ ಬರೋ ತರ ಮಾಡಿದ್ದಾನೆ’ ಅಂತ ಅಣಕಿಸ್ತಾರೆ.+ 22  ಆಮೇಲೆ ಅವರು ‘ಈ ಇಸ್ರಾಯೇಲ್ಯರು ಈಜಿಪ್ಟಿಂದ ತಮ್ಮನ್ನ ಬಿಡಿಸಿದ+ ತಮ್ಮ ಪೂರ್ವಜರ ದೇವರಾದ ಯೆಹೋವನನ್ನ ಬಿಟ್ಟು+ ಬೇರೆ ದೇವರುಗಳನ್ನ ತಮ್ಮ ದೇವರುಗಳನ್ನಾಗಿ ಮಾಡ್ಕೊಂಡ್ರು, ಅವುಗಳಿಗೆ ಅಡ್ಡಬಿದ್ರು, ಅವುಗಳನ್ನ ಆರಾಧಿಸಿದ್ರು.+ ಹಾಗಾಗಿ ಆತನು ಅವ್ರ ಮೇಲೆ ಈ ಕಷ್ಟವನ್ನ ತಂದನು’”+ ಅಂತಾರೆ.

ಪಾದಟಿಪ್ಪಣಿ

ಇದು ಲೇವಿಯರು ಇರಬಹುದು.
ಅಥವಾ “ಹಾಮಾತಿನ ಬಾಗಿಲಿಂದ.”
ಹಬ್ಬದ ಮಾರನೇ ದಿನ ಅಥವಾ 15ನೇ ದಿನ.