ಪೇತ್ರ ಬರೆದ ಎರಡನೇ ಪತ 1:1-21
1 ಯೇಸು ಕ್ರಿಸ್ತನ ದಾಸ, ಅಪೊಸ್ತಲನಾಗಿರೋ ಸೀಮೋನ ಪೇತ್ರ ಬರೆಯೋ ಪತ್ರ. ನೀತಿವಂತನಾದ ನಮ್ಮ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನ ಸಹಾಯದಿಂದ ತುಂಬ ಬೆಲೆಬಾಳೋ ಸತ್ಯವನ್ನ ನೀವು ನಂಬಿದ್ದೀರ. ನಮ್ಮ ತರ ನಂಬಿರೋ ನಿಮಗೆ ನಾನು ಬರೆಯೋದು ಏನಂದ್ರೆ,
2 ನಿಮಗೆ ಇನ್ನೂ ಅಪಾರ ಕೃಪೆ ಮತ್ತು ಶಾಂತಿ ಸಿಗಬೇಕು ಅನ್ನೋದು ನನ್ನಾಸೆ.+ ಅದಕ್ಕಾಗಿ ದೇವರ ಮತ್ತು ನಮ್ಮ ಪ್ರಭು ಯೇಸು ಬಗ್ಗೆ ಚೆನ್ನಾಗಿ ತಿಳ್ಕೊಳ್ಳಿ.
3 ದೇವರಿಗೆ ಭಕ್ತಿ ತೋರಿಸ್ತಾ ಜೀವಿಸೋಕೆ ಬೇಕಾಗಿರೋದನ್ನೆಲ್ಲ ದೇವರು ತನ್ನ ಶಕ್ತಿಯಿಂದ ನಮಗೆ ಕೊಟ್ಟಿದ್ದಾನೆ. ದೇವರ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿರೋದ್ರಿಂದ ಇದೆಲ್ಲ ಸಿಕ್ಕಿದೆ.+ ಆತನು ಮಹಾನ್ ದೇವರು. ಆತನು ಒಳ್ಳೇತನದಿಂದ ತುಂಬಿತುಳುಕ್ತಾ ಇದ್ದಾನೆ. ಅದಕ್ಕೇ ನಮ್ಮನ್ನ ಕರೆದಿದ್ದಾನೆ.
4 ಹಾಗಾಗಿ ಆತನು ನಮಗೆ ಅಮೂಲ್ಯವಾದ, ಅದ್ಭುತವಾದ ಎಷ್ಟೋ ಮಾತು ಕೊಟ್ಟಿದ್ದಾನೆ.+ ಯಾಕಂದ್ರೆ ಇದ್ರಿಂದ ನೀವು ದೇವರ ಗುಣಗಳನ್ನ ಪಡ್ಕೊಂಡು ದೇವರ ತರ ಅದೃಶ್ಯರಾಗಬೇಕು ಅನ್ನೋದು ಆತನ ಆಸೆ.+ ಕೆಟ್ಟ ಆಸೆಗಳಿಂದ ಹುಟ್ಟಿರೋ ಲೋಕದ ಕೆಟ್ಟತನದಿಂದ ನಾವು ದೂರ ಬಂದಿದ್ದಕ್ಕೆ ದೇವರು ಈ ಮಾತನ್ನ ಕೊಟ್ಟಿದ್ದಾನೆ.
5 ಈ ಕಾರಣದಿಂದ ನೀವು ನಿಮ್ಮೆಲ್ಲ ಪ್ರಯತ್ನ ಹಾಕಿ+ ನಂಬಿಕೆ ಜೊತೆ ಒಳ್ಳೇತನವನ್ನ,+ ಒಳ್ಳೇತನದ ಜೊತೆ ಜ್ಞಾನವನ್ನ,+
6 ಜ್ಞಾನದ ಜೊತೆ ಸ್ವನಿಯಂತ್ರಣವನ್ನ, ಸ್ವನಿಯಂತ್ರಣದ+ ಜೊತೆ ತಾಳ್ಮೆಯನ್ನ, ತಾಳ್ಮೆ ಜೊತೆ ದೇವಭಕ್ತಿಯನ್ನ,+
7 ದೇವಭಕ್ತಿ ಜೊತೆ ಸಹೋದರ ಸ್ನೇಹವನ್ನ, ಸಹೋದರ ಸ್ನೇಹದ ಜೊತೆ ಪ್ರೀತಿಯನ್ನ ಬೆಳಿಸ್ಕೊಳ್ಳಿ.+
8 ಈ ಗುಣಗಳು ನಿಮ್ಮಲ್ಲಿ ತುಂಬಿತುಳುಕಿದ್ರೆ ನೀವು ನಮ್ಮ ಪ್ರಭು ಯೇಸು ಕ್ರಿಸ್ತನ ಬಗ್ಗೆ ಚೆನ್ನಾಗಿ ತಿಳ್ಕೊಂಡು ಸುಮ್ಮನೆ ಕೂರಲ್ಲ, ಪ್ರಗತಿ ಮಾಡ್ತಾ ಇರ್ತೀರ.+
9 ಒಬ್ಬ ವ್ಯಕ್ತಿಯಲ್ಲಿ ಈ ಗುಣಗಳು ಇಲ್ಲಾಂದ್ರೆ ಅವನು ಬೆಳಕನ್ನ ನೋಡೋಕೆ ಇಷ್ಟಪಡಲ್ಲ ಅಂತರ್ಥ.+ ಅವನು ಈ ಮುಂಚೆ ಮಾಡಿದ ಪಾಪಗಳಿಂದ ದೇವರು ಅವನನ್ನ ತೊಳಿದಿದ್ದಾನೆ+ ಅಂತನೂ ಅವನು ಮರೆತುಹೋಗ್ತಾನೆ.
10 ಹಾಗಾಗಿ ಸಹೋದರರೇ, ದೇವರು ನಿಮ್ಮನ್ನ ತನ್ನ ಜನರಾಗಿ ಕರೆದು+ ಆರಿಸಿಕೊಂಡಿದ್ರಿಂದ ಆ ಸುಯೋಗವನ್ನ ಉಳಿಸ್ಕೊಳ್ಳಿ. ಈ ಗುಣಗಳನ್ನ ನೀವು ಬೆಳೆಸ್ಕೊಳ್ತಾ ಹೋದ್ರೆ ಅದು ನಿಮ್ಮ ಕೈಜಾರಿ ಹೋಗಲ್ಲ.+
11 ಹೀಗೆ ನಮ್ಮ ಪ್ರಭು, ರಕ್ಷಕ ಆಗಿರೋ ಯೇಸು ಕ್ರಿಸ್ತ ರಾಜನಾಗಿ ಬರುವಾಗ ನಿಮಗೆ ಅದ್ಧೂರಿ ಸ್ವಾಗತ ಸಿಗುತ್ತೆ.+ ಆತನ ಆಳ್ವಿಕೆ ಯಾವಾಗ್ಲೂ ಇರುತ್ತೆ.+
12 ಈ ಕಾರಣದಿಂದಾನೇ, ನಿಮಗೆ ಈ ವಿಷ್ಯಗಳೆಲ್ಲ ಗೊತ್ತಿದ್ರೂ, ನೀವು ಸತ್ಯದಲ್ಲಿ ಬಲವಾಗಿದ್ರೂ ಇದರ ಬಗ್ಗೆ ನಿಮಗೆ ನೆನಪು ಹುಟ್ಟಿಸ್ತಾ ಇರ್ತಿನಿ.
13 ನಾನು ನನ್ನ ದೇಹ ಅನ್ನೋ ಈ ಗುಡಾರದಲ್ಲಿ+ ಇರೋ ತನಕ ನಿಮಗೆ ನೆನಪು ಹುಟ್ಟಿಸ್ತಾ,+ ಹುರುಪು ತುಂಬಿಸ್ತಾ ಇರೋದು ಸರಿ ಅಂತ ನನಗೆ ಅನಿಸುತ್ತೆ.
14 ಯಾಕಂದ್ರೆ ಈ ದೇಹ ಅನ್ನೋ ಗುಡಾರ ತುಂಬ ದಿನ ಇರಲ್ಲ ಅಂತ ನಂಗೊತ್ತು. ನಮ್ಮ ಪ್ರಭು ಯೇಸು ಕ್ರಿಸ್ತನೂ ನನಗೆ ಅದನ್ನ ಸ್ಪಷ್ಟವಾಗಿ ಹೇಳಿದ್ದನು.+
15 ಹಾಗಾಗಿ ನಾನು ಇರೋ ತನಕ ನನ್ನಿಂದ ಸಾಧ್ಯ ಆದಷ್ಟು ನಿಮಗೆ ನೆನಪಿಸ್ತೀನಿ. ಆಗ ನಾನು ಹೋದ ಮೇಲೂ ನೀವು ಈ ವಿಷ್ಯಗಳನ್ನ ನೆನಪಿಸ್ಕೊಳ್ಳೋಕೆ ಆಗುತ್ತೆ.
16 ನಮ್ಮ ಪ್ರಭು ಯೇಸು ಕ್ರಿಸ್ತನ ಶಕ್ತಿ ಬಗ್ಗೆ, ಆತನು ಮತ್ತೆ ಬರೋ ಕಾಲದ ಬಗ್ಗೆ ನಿಮಗೆ ಹೇಳಿದ್ದೆಲ್ಲ ನಾವೇ ಹುಟ್ಟುಹಾಕಿದ ಕಟ್ಟುಕಥೆ ಅಲ್ಲ. ಆತನು ಎಷ್ಟು ಮಹಾನ್ ವ್ಯಕ್ತಿ ಅಂತ ನಾವು ಕಣ್ಣಾರೆ ನೋಡಿದ್ವಿ.+
17 “ಇವನು ನನ್ನ ಪ್ರೀತಿಯ ಮಗ. ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ”+ ಅನ್ನೋ ಮಾತುಗಳನ್ನ ತುಂಬಾ ಮಹಿಮೆ ಇರೋ ದೇವರು ಹೇಳಿದಾಗ ಆತನಿಗೆ ತಂದೆಯಾದ ದೇವರಿಂದ ಗೌರವ, ಘನತೆ ಸಿಕ್ತು.
18 ನಾವು ಯೇಸು ಜೊತೆ ಪವಿತ್ರ ಬೆಟ್ಟದಲ್ಲಿ ಇದ್ದಾಗ ಸ್ವರ್ಗದಿಂದ ಬಂದ ಆ ಮಾತುಗಳನ್ನ ಕೇಳಿಸ್ಕೊಂಡ್ವಿ.
19 ಹಾಗಾಗಿ ದೇವರು ಹೇಳಿರೋ ಮಾತೆಲ್ಲ ನಿಜ ಆಗುತ್ತೆ ಅಂತ ನಮಗೆ ಪೂರ್ತಿ ನಂಬಿಕೆ ಬಂತು. ಆ ಎಲ್ಲ ಮಾತಿಗೆ ಗಮನ ಕೊಟ್ಟು ನೀವು ಒಳ್ಳೇ ಕೆಲಸ ಮಾಡ್ತಾ ಇದ್ದೀರ. ಯಾಕಂದ್ರೆ (ಎಲ್ಲಿ ತನಕ ಕತ್ತಲೆ ಹೋಗಿ ನಸುಕಿನ ನಕ್ಷತ್ರ+ ಬರಲ್ವೋ ಅಲ್ಲಿ ತನಕ) ಕತ್ತಲೆ ಇರೋ ಜಾಗದಲ್ಲಿ ಬೆಳಗೋ ದೀಪದ+ ತರ ಆ ಮಾತುಗಳು ನಿಮ್ಮ ಹೃದಯದಲ್ಲಿ ಬೆಳಗ್ತಾ ಇರುತ್ತೆ.
20 ಪವಿತ್ರ ಗ್ರಂಥದಲ್ಲಿ ಇರೋ ಯಾವ ಭವಿಷ್ಯವಾಣಿನೂ ಮನುಷ್ಯನ ಆಲೋಚನೆಯಿಂದ ಹುಟ್ಕೊಂಡಿಲ್ಲ ಅನ್ನೋ ಪ್ರಾಮುಖ್ಯ ವಿಷ್ಯವನ್ನ ಮನಸ್ಸಲ್ಲಿಡಿ.
21 ಯಾಕಂದ್ರೆ ಯಾವ ಭವಿಷ್ಯವಾಣಿನೂ ಮನುಷ್ಯನ ಇಷ್ಟದ ಪ್ರಕಾರ ಬರಲಿಲ್ಲ,+ ಬದಲಿಗೆ ದೇವರು ಹೇಳಿದ್ದನ್ನೇ ಮನುಷ್ಯರು ಪವಿತ್ರಶಕ್ತಿಯ ಸಹಾಯದಿಂದ ಮಾತಾಡಿದ್ರು.+