ಯೋಹಾನ ಬರೆದ ಎರಡನೇ ಪತ್ರ 1:1-13

  • ವಂದನೆಗಳು (1-3)

  • ಸತ್ಯದಲ್ಲಿ ನಡಿತಾ ಇರಿ (4-6)

  • ಮೋಸಗಾರರು ಇದ್ದಾರೆ ಎಚ್ಚರಿಕೆ (7-11)

    • ಅವ್ರಿಗೆ ನಮಸ್ಕಾರ ಹೇಳಬೇಡಿ (10-11)

  • ಭೇಟಿಮಾಡೋಕೆ ಯೋಜನೆ ಮತ್ತು ವಂದನೆಗಳು (12-13)

 ದೇವರು ಆರಿಸ್ಕೊಂಡ ಸಹೋದರಿಗೆ ಮತ್ತು ಅವಳ ಮಕ್ಕಳಿಗೆ ಮುದುಕನಾಗಿರೋ ನಾನು ಬರಿತಾ ಇರೋ ಪತ್ರ. ನಾನು ನಿಮ್ಮನ್ನ ನಿಜವಾಗ್ಲೂ ಪ್ರೀತಿಸ್ತೀನಿ. ನಾನಷ್ಟೆ ಅಲ್ಲ, ಸತ್ಯ ಗೊತ್ತಿರೋ ಎಲ್ರೂ ನಿಮ್ಮನ್ನ ಪ್ರೀತಿಸ್ತಿದ್ದಾರೆ.  ನಮ್ಮೆಲ್ಲರಲ್ಲಿ ಈಗ್ಲೂ ಯಾವಾಗ್ಲೂ ಇರೋ ಆ ಸತ್ಯಾನೇ ನಾವು ನಿಮ್ಮನ್ನ ಪ್ರೀತಿಸೋ ಹಾಗೆ ಮಾಡಿದೆ.  ನಮ್ಮ ತಂದೆಯಾದ ದೇವರು ಮತ್ತು ಆತನ ಮಗ ಯೇಸು ಕ್ರಿಸ್ತ ತೋರಿಸೋ ಅಪಾರ ಕೃಪೆ, ಕರುಣೆ, ಶಾಂತಿ ಯಾವಾಗ್ಲೂ ನಮ್ಮ ಜೊತೆನೇ ಇರುತ್ತೆ. ಅಷ್ಟೇ ಅಲ್ಲ, ಅವರು ನಮಗೆ ಸತ್ಯ ಕಲಿಸ್ತಾರೆ, ನಮ್ಮನ್ನ ಪ್ರೀತಿಸ್ತಾರೆ.  ತಂದೆ ನಮಗೆ ಕೊಟ್ಟಿರೋ ಆಜ್ಞೆ ತರಾನೇ ನಿನ್ನ ಮಕ್ಕಳಲ್ಲಿ ಕೆಲವರು ಸತ್ಯದಲ್ಲಿ ನಡಿತಾ ಇದ್ದಾರೆ ಅಂತ ಕೇಳಿ ತುಂಬ ಖುಷಿಯಾಯ್ತು.+  ಹಾಗಾಗಿ ಸಹೋದರಿ, ನಾವು ಒಬ್ರನ್ನೊಬ್ರು ಪ್ರೀತಿಸಬೇಕು ಅನ್ನೋ ಆಜ್ಞೆ ಪಾಲಿಸ್ತಾ ಇರಬೇಕು ಅಂತ ಕೇಳ್ಕೊಳ್ತಾ ಇದ್ದೀನಿ. (ನಾನು ಬರಿತಾ ಇರೋದು ಹೊಸ ಆಜ್ಞೆ ಏನಲ್ಲ. ಈ ಆಜ್ಞೆ ಮೊದಲಿಂದಾನೇ ಇತ್ತು.)+  ದೇವರ ಆಜ್ಞೆಗಳನ್ನ ಪಾಲಿಸ್ತಾ ಇರೋದೇ ಪ್ರೀತಿ. ನಾವು ಪ್ರೀತಿಸ್ತಾ ಇರಬೇಕು ಅಂತ ದೇವರು ಆಜ್ಞೆ ಕೊಟ್ಟನು.+ ಇದನ್ನ ನೀವು ಮೊದಲಿಂದಾನೂ ಕೇಳ್ತಾನೇ ಇದ್ದೀರ.  ತುಂಬ ಜನ ಮೋಸಗಾರರು ಲೋಕದಲ್ಲಿ ಇದ್ದಾರೆ.+ ಯೇಸು ಕ್ರಿಸ್ತ ಮನುಷ್ಯನಾಗಿ ಬಂದ ಅನ್ನೋ ವಿಷ್ಯವನ್ನೇ ಅವರು ಒಪ್ಕೊಳ್ಳಲ್ಲ.+ ಒಪ್ಕೊಳ್ಳದ ವ್ಯಕ್ತಿ ಮೋಸಗಾರ, ಕ್ರಿಸ್ತ ವಿರೋಧಿ.+  ನಾವು ಕಷ್ಟಪಟ್ಟು ಪಡಿದಿದ್ದನ್ನ ನೀವು ಕಳ್ಕೊಳ್ಳದ ಹಾಗೆ ಜಾಗ್ರತೆವಹಿಸಿ. ಆಗ ದೇವರು ನಿಮಗೋಸ್ಕರ ಸಿದ್ಧವಾಗಿ ಇಟ್ಟಿರೋ ಆಶೀರ್ವಾದಗಳು ಸಿಗುತ್ತೆ.+  ಯಾರಾದ್ರೂ ಕ್ರಿಸ್ತ ಕಲಿಸಿದ ವಿಷ್ಯಗಳನ್ನ ಬಿಟ್ಟು ತಪ್ಪು ದಾರಿ ಹಿಡಿದು ಆತನು ಕಲಿಸಿದ ಪ್ರಕಾರ ಮಾಡದೆ ಇದ್ರೆ ಅವ್ರನ್ನ ತಂದೆ ಒಪ್ಕೊಳ್ಳಲ್ಲ.+ ಆತನು ಕಲಿಸಿದ ವಿಷ್ಯಗಳ ಪ್ರಕಾರ ನಡೆದ್ರೆ ತಂದೆ ಮಗ ಇಬ್ರೂ ನಿಮ್ಮನ್ನ ಒಪ್ಕೊಳ್ತಾರೆ.+ 10  ಯಾರಾದ್ರೂ ನಿಮ್ಮ ಹತ್ರ ಬಂದು ಕ್ರಿಸ್ತ ಕಲಿಸಿದ ವಿಷ್ಯಗಳನ್ನ ಕಲಿಸದಿದ್ರೆ ಅಂಥವ್ರನ್ನ ಮನೆ ಒಳಗೆ ಕರಿಬೇಡಿ.+ ಅವ್ರಿಗೆ ನಮಸ್ಕಾರ ಹೇಳಕ್ಕೂ ಹೋಗಬೇಡಿ. 11  ಯಾಕಂದ್ರೆ ಅವ್ರಿಗೆ ನಮಸ್ಕಾರ ಹೇಳಿದ್ರೆ ನಾವೂ ಅವ್ರ ಕೆಟ್ಟ ಕೆಲಸದಲ್ಲಿ ಪಾಲು ತಗೊಂಡ ಹಾಗೆ ಆಗುತ್ತೆ. 12  ನಿಮಗೆ ಬರೆಯೋಕೆ ಇನ್ನೂ ತುಂಬಾ ಇದೆ. ಆದ್ರೆ ಅದನ್ನ ಹೀಗೆ ಮಸಿಯಿಂದ ಕಾಗದದ ಮೇಲೆ ಬರೆಯೋಕೆ ನನಗಿಷ್ಟ ಇಲ್ಲ. ನಿಮ್ಮ ಹತ್ರ ಬಂದು ನಿಮ್ಮ ಜೊತೆ ಕೂತ್ಕೊಂಡು ಮಾತಾಡೋಕೆ ನಾನು ಕಾಯ್ತಾ ಇದ್ದೀನಿ. ಆಗ ನಿಮಗೆ ತುಂಬ ಖುಷಿಯಾಗುತ್ತೆ. 13  ದೇವರು ಆರಿಸ್ಕೊಂಡಿರೋ ನಿನ್ನ ಅಕ್ಕನ ಮಕ್ಕಳು ನಿನ್ನನ್ನ ತುಂಬ ಕೇಳಿದ್ದಾರೆ.

ಪಾದಟಿಪ್ಪಣಿ