ಎರಡನೇ ಸಮುವೇಲ 14:1-33

  • ಯೋವಾಬ ಮತ್ತು ತೆಕೋವದ ಸ್ತ್ರೀ (1-17)

  • ಯೋವಾಬನ ಸಂಚು ದಾವೀದನಿಗೆ ಗೊತ್ತಾಯ್ತು (18-20)

  • ಅಬ್ಷಾಲೋಮ ವಾಪಸ್‌ ಬರೋಕೆ ಅನುಮತಿ ಸಿಕ್ತು (21-33)

14  ರಾಜ ಅಬ್ಷಾಲೋಮನನ್ನ+ ನೋಡೋಕೆ ಹಾತೊರೆಯುತ್ತಿದ್ದಾನೆ ಅನ್ನೋ ವಿಷ್ಯ ಚೆರೂಯಳ+ ಮಗನಾದ ಯೋವಾಬನಿಗೆ ಗೊತ್ತಾಯ್ತು.  ಹಾಗಾಗಿ ಯೋವಾಬ ತೆಕೋವಕ್ಕೆ+ ಜನ್ರನ್ನ ಕಳಿಸಿ ಅಲ್ಲಿಂದ ಒಬ್ಬ ಬುದ್ಧಿವಂತ ಸ್ತ್ರೀಯನ್ನ ಕರಿಸಿದ. ಅವನು ಅವಳಿಗೆ “ದಯವಿಟ್ಟು ನೀನು ಶೋಕದಲ್ಲಿರೋ ತರ ನಟಿಸು. ಶೋಕದ ಬಟ್ಟೆಗಳನ್ನ ಹಾಕೋ. ಶರೀರಕ್ಕೆ ತೈಲ ಹಚ್ಕೊಳ್ಳಬೇಡ.+ ತೀರಿಹೋಗಿರೋ ಒಬ್ಬ ವ್ಯಕ್ತಿಗಾಗಿ ತುಂಬ ಸಮಯದಿಂದ ಶೋಕದಲ್ಲಿರೋ ಒಬ್ಬ ಸ್ತ್ರೀ ತರ ನಡ್ಕೊ.  ನಾನು ಹೇಳೋ ಮಾತನ್ನ ಹೋಗಿ ರಾಜನಿಗೆ ಹೇಳು” ಅಂದ. ಆಮೇಲೆ ರಾಜನಿಗೆ ಏನು ಹೇಳಬೇಕಂತ ಯೋವಾಬ ಅವಳಿಗೆ ತಿಳಿಸಿದ.  ತೆಕೋವದ ಆ ಸ್ತ್ರೀ ರಾಜನ ಹತ್ರ ಹೋಗಿ ಮಂಡಿಯೂರಿ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿ “ರಾಜನೇ, ನನಗೆ ಸಹಾಯ ಮಾಡು!” ಅಂದಳು.  ರಾಜ ಅವಳಿಗೆ “ಏನು ವಿಷ್ಯ?” ಅಂತ ಕೇಳಿದ. ಅದಕ್ಕೆ ಅವಳು “ನಾನು ಒಬ್ಬ ವಿಧವೆ. ನನ್ನ ಗಂಡ ತೀರಿಹೋಗಿದ್ದಾನೆ.  ನಿನ್ನ ಸೇವಕಿಯಾದ ನನಗೆ, ಇಬ್ರು ಗಂಡು ಮಕ್ಕಳು ಇದ್ರು. ಒಬ್ಬರಿಗೊಬ್ರು ಬಯಲಲ್ಲಿ ಹೊಡೆದಾಡಿದ್ರು. ಅವ್ರನ್ನ ಬಿಡಿಸೋಕೆ ಯಾರೂ ಇರ್ಲಿಲ್ಲ. ಒಬ್ಬ ಇನ್ನೊಬ್ಬನನ್ನ ಸಾಯಿಸಿಬಿಟ್ಟ.  ಈಗ ಇಡೀ ಕುಟುಂಬ ನಿನ್ನ ಸೇವಕಿಯಾದ ನನ್ನ ವಿರುದ್ಧ ತಿರುಗಿಬಿದ್ದಿದೆ. ಕುಟುಂಬದವರು ನನಗೆ ‘ತನ್ನ ಸಹೋದರನನ್ನ ಸಾಯಿಸಿದವನನ್ನ ನಮ್ಮ ಕೈಗೆ ಒಪ್ಪಿಸು. ವಾರಸುದಾರನನ್ನ ಅಳಿಸಿ ಹಾಕಿದ್ರೂ ಪರವಾಗಿಲ್ಲ, ಅವನ ಸಹೋದರನ ಜೀವ ತೆಗೆದದ್ರಿಂದ ನಾವು ಅವನನ್ನ ಸಾಯಿಸ್ತೀವಿ’+ ಅಂತಿದ್ದಾರೆ. ನನ್ನಲ್ಲಿ ಉಳಿದಿರೋ ಕೊನೆ ಕೆಂಡವನ್ನ* ಕೂಡ ಆರಿಸಬೇಕಂತ ಇದ್ದಾರೆ. ಆಗ ನನ್ನ ಗಂಡನ ಹೆಸ್ರಾಗ್ಲಿ ಅವನ ಸಂತಾನವಾಗ್ಲಿ* ಈ ಭೂಮಿ ಮೇಲೆ ಇಲ್ಲದೆ ಹೋಗುತ್ತೆ” ಅಂದಳು.  ಆಗ ರಾಜ ಆ ಸ್ತ್ರೀಗೆ “ನೀನು ಮನೆಗೆ ಹೋಗು, ನಾನು ಈ ವಿಷ್ಯ ನೋಡ್ಕೊಳ್ತೀನಿ” ಅಂದ.  ಅದಕ್ಕೆ ತೆಕೋವದ ಆ ಸ್ತ್ರೀ ರಾಜನಿಗೆ “ನನ್ನ ಒಡೆಯನಾದ ರಾಜನೇ, ನನ್ನ ಮಗ ಮಾಡಿದ ಈ ಅಪರಾಧ ನನ್ನ ಮೇಲೆ, ನನ್ನ ತಂದೆ ಮನೆ ಮೇಲೆ ಇರಲಿ. ರಾಜನ, ಅವನ ಸಿಂಹಾಸನದ ಮೇಲೆ ಬರದಿರಲಿ” ಅಂದಳು. 10  ಆಮೇಲೆ ರಾಜ ಅವಳಿಗೆ “ಯಾರಾದ್ರೂ ಇದ್ರ ಬಗ್ಗೆ ಮಾತಾಡಿದ್ರೆ ಅವ್ರನ್ನ ನನ್ನ ಹತ್ರ ಕರ್ಕೊಂಡು ಬಾ. ಅವರು ನಿನಗೆ ಯಾವತ್ತೂ ತೊಂದ್ರೆ ಮಾಡಲ್ಲ” ಅಂದ. 11  ಆದ್ರೆ ಆ ಸ್ತ್ರೀ “ಹತ್ರದ ಸಂಬಂಧಿ ನನ್ನ ಮಗನ ಮೇಲೆ ಸೇಡು ತೀರಿಸಿ+ ಅವನನ್ನ ಸಾಯಿಸಿ ನಾಶ ಮಾಡದ ಹಾಗೇ ದಯವಿಟ್ಟು ನಿನ್ನ ದೇವರಾದ ಯೆಹೋವನನ್ನ ನೆನಪಿಸ್ಕೊ” ಅಂದಳು. ಅದಕ್ಕೆ ಅವನು “ಜೀವ ಇರೋ ಯೆಹೋವನ ಆಣೆ,+ ನಿನ್ನ ಮಗನ ಒಂದೇ ಒಂದು ಕೂದ್ಲು ಸಹ ನೆಲಕ್ಕೆ ಬೀಳಲ್ಲ” ಅಂದ. 12  ಆಗ ಆ ಸ್ತ್ರೀ “ನಿನ್ನ ಸೇವಕಿ ಇನ್ನೊಂದು ಮಾತನ್ನ ನನ್ನ ಒಡೆಯನಾದ ರಾಜನಿಗೆ ಹೇಳೋದಕ್ಕೆ ಅನುಮತಿ ಕೊಡು” ಅಂದಾಗ ಅವನು “ಹೇಳು!” ಅಂದ. 13  ಆಗ ಸ್ತ್ರೀ “ರಾಜ, ದೇವರ ಜನ್ರಿಗೆ ಹಾನಿ ಆಗೋ ರೀತಿಯಲ್ಲಿ ನೀನ್ಯಾಕೆ ನಡ್ಕೊಂಡೆ?+ ನಿನ್ನ ಸ್ವಂತ ಮಗನನ್ನೇ ಹೊರಗೆ ಹಾಕಿ, ಅವನನ್ನ ವಾಪಸ್‌ ಕರ್ಕೊಂಡು ಬರದೆ ಇದ್ದೀಯ.+ ಹೀಗೆ ಈಗಷ್ಟೇ ನೀನು ಹೇಳಿದ ಆ ತಪ್ಪನ್ನ ನೀನೇ ಮಾಡಿದ ಹಾಗಾಯ್ತು. 14  ನಾವೆಲ್ಲ ಸಾಯುವವರೇ, ನೆಲಕ್ಕೆ ಚೆಲ್ಲಿರೋ ನೀರಿನ ತರ ಇರುವವರೇ. ಆ ನೀರನ್ನ ತಿರುಗಿ ತುಂಬಿಸೋಕೆ ಆಗಲ್ಲ. ಆದ್ರೂ ದೇವರು ಜೀವ ತೆಗಿಯಲ್ಲ. ಒಮ್ಮೆ ತಳ್ಳಿಹಾಕಿದವನನ್ನ ಶಾಶ್ವತವಾಗಿ ತಳ್ಳಿಹಾಕದೇ ಇರೋಕೆ ಕಾರಣಗಳನ್ನ ಹುಡುಕ್ತಾನೆ. 15  ಜನ್ರು ನನ್ನನ್ನ ಹೆದರಿಸಿದ್ರಿಂದ ನಾನು ನನ್ನ ಒಡೆಯನಾದ ರಾಜನ ಹತ್ರ ಬಂದು ಇದನ್ನ ಹೇಳಿದೆ. ಅಷ್ಟೇ ಅಲ್ಲ ನಿನ್ನ ಸೇವಕಿಯಾದ ನಾನು ನನ್ನಲ್ಲೇ ‘ರಾಜನ ಜೊತೆ ಈ ವಿಷ್ಯದ ಬಗ್ಗೆನೂ ಮಾತಾಡಿ ನೋಡ್ತೀನಿ. ರಾಜ ನನ್ನ ಆಸೆಯನ್ನ ಸ್ವೀಕರಿಸಬಹುದು. 16  ರಾಜ ನನ್ನ ಮಾತು ಕೇಳಬಹುದು. ದೇವರು ನಮಗೆ ಆಸ್ತಿಯಾಗಿ ಕೊಟ್ಟಿರೋ ಪ್ರದೇಶದಿಂದ ನನ್ನನ್ನ, ಉಳಿದಿರೋ ನನ್ನ ಮಗನನ್ನ ನಾಶ ಮಾಡೋಕೆ ಹುಡುಕ್ತಾ ಇರುವವನ ಕೈಯಿಂದ ತನ್ನ ಸೇವಕಿಯನ್ನ ಕಾಪಾಡಬಹುದು’ ಅಂದ್ಕೊಂಡೆ.+ 17  ಆಮೇಲೆ ‘ನನ್ನ ಒಡೆಯನಾದ ರಾಜನ ಮಾತುಗಳು ನನಗೆ ಸಮಾಧಾನ ತರುತ್ತೆ’ ಅಂದ್ಕೊಂಡೆ. ಯಾಕಂದ್ರೆ ಕೆಟ್ಟದು ಯಾವುದು ಒಳ್ಳೇದು ಯಾವುದು ಅಂತ ಕಂಡುಹಿಡಿಯೋ ವಿಷ್ಯದಲ್ಲಿ ನನ್ನ ಒಡೆಯನಾದ ರಾಜ ಸತ್ಯ ದೇವರ ದೂತನ ತರ ಇದ್ದಾನೆ. ನಿನ್ನ ದೇವರಾದ ಯೆಹೋವ ನಿನ್ನ ಜೊತೆ ಇರಲಿ” ಅಂದಳು. 18  ರಾಜ ಆ ಸ್ತ್ರೀಗೆ “ನಾನು ಒಂದು ವಿಷ್ಯ ಕೇಳ್ತೀನಿ, ದಯವಿಟ್ಟು ಮುಚ್ಚಿಡಬೇಡ” ಅಂದ. ಆಗ ಅವಳು “ದಯಮಾಡಿ ಕೇಳು” ಅಂದಳು. 19  ಆಗ ರಾಜ “ನೀನು ಹೇಳಿದ ಎಲ್ಲ ವಿಷ್ಯಗಳ ಹಿಂದೆ ಯೋವಾಬನ ಕೈವಾಡ ಇದ್ಯಾ?”+ ಅಂತ ಕೇಳಿದ. ಅದಕ್ಕೆ ಆ ಸ್ತ್ರೀ “ನನ್ನ ಒಡೆಯನಾದ ರಾಜ ಹೇಳಿದ್ದು ಸರಿ.* ನನ್ನ ಒಡೆಯನಾದ ರಾಜನ ಮೇಲೆ ಆಣೆಯಿಟ್ಟು ಹೇಳ್ತೀನಿ, ನಿನ್ನ ಸೇವಕನಾದ ಯೋವಾಬ ನನ್ನನ್ನ ಈ ಎಲ್ಲ ವಿಷ್ಯಗಳನ್ನ ಹೇಳೋಕೆ ಕಳಿಸಿದ. 20  ನೀನು ಈ ವಿಷ್ಯವನ್ನ ಇನ್ನೊಂದು ದೃಷ್ಟಿಕೋನದಲ್ಲಿ ನೋಡಬೇಕಂತ ನಿನ್ನ ಸೇವಕನಾದ ಯೋವಾಬ ಹೀಗೆ ಮಾಡಿದ. ಆದ್ರೆ ನನ್ನ ಒಡೆಯನಿಗೆ ಸತ್ಯದೇವರ ದೂತನಿಗೆ ಇರುವಷ್ಟು ವಿವೇಕ ಇದೆ, ದೇಶದಲ್ಲಿ ಏನೆಲ್ಲ ಆಗ್ತಿದೆ ಅನ್ನೋದು ಗೊತ್ತಿದೆ” ಅಂದಳು. 21  ಆಮೇಲೆ ರಾಜ ಯೋವಾಬನಿಗೆ “ಸರಿ, ನಾನು ಹಾಗೇ ಮಾಡ್ತೀನಿ.+ ಹೋಗಿ ಯೌವನಸ್ಥನಾಗಿರೋ ಅಬ್ಷಾಲೋಮನನ್ನ ಕರ್ಕೊಂಡು ಬಾ”+ ಅಂದ. 22  ಅದಕ್ಕೆ ಯೋವಾಬ ಮಂಡಿಯೂರಿ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿ ರಾಜನನ್ನ ಹೊಗಳಿದ. “ನನ್ನ ಒಡೆಯನಾದ ರಾಜ, ಈ ನಿನ್ನ ಸೇವಕನ ಕೋರಿಕೆ ಈಡೇರಿದೆ. ಹೀಗೆ ನನ್ನ ಮೇಲೆ ದಯೆ ತೋರಿಸಿದ್ದೀಯ ಅಂತ ಇವತ್ತು ನನಗೆ ಗೊತ್ತಾಯ್ತು” ಅಂದ. 23  ಆಮೇಲೆ ಯೋವಾಬ ಗೆಷೂರಿಗೆ+ ಹೋಗಿ ಅಬ್ಷಾಲೋಮನನ್ನ ಯೆರೂಸಲೇಮಿಗೆ ಕರ್ಕೊಂಡು ಬಂದ. 24  ಆದ್ರೆ ರಾಜ “ನನಗೆ ಮುಖ ತೋರಿಸದೆ ಅವನು ತನ್ನ ಮನೆಗೆ ಹೋಗ್ಲಿ” ಅಂದ. ಹಾಗಾಗಿ ಅಬ್ಷಾಲೋಮ ರಾಜನ ಮುಖ ನೋಡದೆ, ತನ್ನ ಮನೆಗೆ ಹೋದ. 25  ಅಬ್ಷಾಲೋಮ ತುಂಬ ಸುಂದರ ಯುವಕನಾಗಿದ್ದ. ಅಂಗಾಲಿಂದ ನಡುನೆತ್ತಿ ತನಕ ಅವನಲ್ಲಿ ಒಂದು ಕೊರತೆನೂ ಇರಲಿಲ್ಲ. ಅವನಷ್ಟು ಸುಂದರವಾದ ವ್ಯಕ್ತಿ ಆ ದೇಶದಲ್ಲಿ ಯಾರೂ ಇರಲಿಲ್ಲ. ಎಲ್ಲಿ ನೋಡಿದ್ರೂ ಜನ್ರು ಅವನ ರೂಪದ ಬಗ್ಗೆನೇ ಹಾಡಿಹೊಗಳ್ತಾ ಇದ್ರು. 26  ಅವನಿಗೆ ತುಂಬ ತಲೆಕೂದಲು ಇದ್ದಿದ್ರಿಂದ ಅವನು ಪ್ರತಿ ವರ್ಷ ಕೊನೆಯಲ್ಲಿ ಅದನ್ನ ಕತ್ತರಿಸ್ತಿದ್ದ. ಅವನು ತಲೆ ಕೂದಲನ್ನ ಕತ್ತರಿಸಿದ್ರೆ ರಾಜತೂಕದ ಕಲ್ಲಿನ* ಪ್ರಕಾರ ಅದ್ರ ತೂಕ 200 ಶೆಕೆಲ್‌* ಇರ್ತಿತ್ತು. 27  ಅಬ್ಷಾಲೋಮನಿಗೆ ಮೂರು ಗಂಡು ಮಕ್ಕಳು,+ ಒಬ್ಬಳು ಮಗಳು. ಅವಳ ಹೆಸ್ರು ತಾಮಾರ. ಅವಳು ಕೂಡ ನೋಡೋಕೆ ತುಂಬ ಚೆನ್ನಾಗಿದ್ದಳು. 28  ದಾವೀದನ ಮುಖ ನೋಡದೆ ಅಬ್ಷಾಲೋಮ ಯೆರೂಸಲೇಮಲ್ಲೇ ವಾಸ ಇದ್ದ. ಹೀಗೆ ಎರಡು ವರ್ಷ ಕಳೀತು.+ 29  ಹಾಗಾಗಿ ಯೋವಾಬನನ್ನ ರಾಜನ ಹತ್ರ ಕಳಿಸೋಕೆ ಅಬ್ಷಾಲೋಮ ಅವನಿಗೆ ಬರೋಕೆ ಹೇಳಿದ. ಆದ್ರೆ ಯೋವಾಬ ಬರಲಿಲ್ಲ. ಆಮೇಲೆ ಅಬ್ಷಾಲೋಮ ಅವನಿಗಾಗಿ ಎರಡನೇ ಸಲ ಬರೋಕೆ ಹೇಳಿದ. ಆಗ್ಲೂ ಅವನು ಬರಲಿಲ್ಲ. 30  ಕೊನೆಗೆ ಅಬ್ಷಾಲೋಮ ತನ್ನ ಸೇವಕರಿಗೆ “ಯೋವಾಬನ ಜಮೀನು ನನ್ನ ಜಮೀನಿನ ಪಕ್ಕದಲ್ಲೇ ಇದೆ. ಅದ್ರಲ್ಲಿ ಅವನು ಜವೆಗೋದಿ ಹಾಕಿದ್ದಾನೆ. ಹೋಗಿ ಅದಕ್ಕೆ ಬೆಂಕಿ ಹಚ್ಚಿ” ಅಂದ. ಅಬ್ಷಾಲೋಮನ ಸೇವಕರು ಆ ಜಮೀನಿಗೆ ಬೆಂಕಿ ಹಚ್ಚಿದ್ರು. 31  ಆಗ ಯೋವಾಬ ಅಬ್ಷಾಲೋಮನ ಮನೆಗೆ ಬಂದು “ನಿನ್ನ ಸೇವಕರು ನನ್ನ ಜಮೀನಿಗೆ ಯಾಕೆ ಬೆಂಕಿ ಹಚ್ಚಿದ್ರು?” ಅಂತ ಕೇಳಿದ. 32  ಅದಕ್ಕೆ ಅಬ್ಷಾಲೋಮ “ನಿನ್ನನ್ನ ಬರೋಕೆ ಹೇಳಿ ಕಳಿಸಿದ್ದೆ ಅಲ್ವಾ? ‘“ಗೆಷೂರಿಂದ ನಾನ್ಯಾಕೆ ಬರಬೇಕಿತ್ತು?+ ನಾನು ಅಲ್ಲೇ ಇದ್ದಿದ್ರೆ ಎಷ್ಟೋ ಚೆನ್ನಾಗಿರ್ತಿತ್ತು. ರಾಜನ ಮುಖ ನೋಡೋಕೆ ನನಗೆ ಈಗ ಅನುಮತಿ ಕೊಡೋಕೆ ಹೇಳು. ನನ್ನಿಂದ ಯಾವುದಾದ್ರೂ ತಪ್ಪಾಗಿದ್ರೆ ರಾಜ ನನ್ನನ್ನ ಸಾಯಿಸಲಿ” ಅಂತ ನೀನು ನನಗಾಗಿ ರಾಜನ ಹತ್ರ ಹೋಗಿ ಕೇಳು ಅಂತ ನಿನಗೆ ಹೇಳಿದ್ದೆ’” ಅಂದ. 33  ಯೋವಾಬ ರಾಜನ ಹತ್ರ ಹೋಗಿ ಇದನ್ನ ಹೇಳಿದಾಗ ರಾಜ ಅಬ್ಷಾಲೋಮನನ್ನ ಕರೆಸಿದ. ರಾಜನ ಹತ್ರ ಬಂದ ಅಬ್ಷಾಲೋಮ ಮಂಡಿಯೂರಿ ನೆಲದ ತನಕ ಬಗ್ಗಿ ರಾಜನಿಗೆ ನಮಸ್ಕಾರ ಮಾಡಿದ. ಆಮೇಲೆ ರಾಜ ಅಬ್ಷಾಲೋಮನಿಗೆ ಮುತ್ತು ಕೊಟ್ಟ.+

ಪಾದಟಿಪ್ಪಣಿ

ಅದು, ವಂಶಾವಳಿಗಾಗಿ ಇದ್ದ ಕೊನೇ ನಿರೀಕ್ಷೆ.
ಅಕ್ಷ. “ಉಳಿಕೆ.”
ಅಥವಾ “ರಾಜ ಹೇಳಿದ ಮಾತುಗಳನ್ನ ಬಿಟ್ಟು ಯಾರು ಸಹ ಎಡಕ್ಕಾಗ್ಲಿ ಬಲಕ್ಕಾಗ್ಲಿ ತಿರುಗೋಕೆ ಆಗಲ್ಲ.”
ಇದು ಆಸ್ಥಾನದಲ್ಲಿ ಇಡಲಾಗಿದ್ದ “ರಾಜತೂಕದ” ಪ್ರಮಾಣ ಆಗಿರಬಹುದು ಅಥವಾ ರಾಜನ ಆಸ್ಥಾನದಲ್ಲಿ ಬಳಸ್ತಿದ್ದ ಈ ಶೆಕೆಲ್‌ ಸಾಮಾನ್ಯ ಶೆಕೆಲಿಗಿಂತ ಭಿನ್ನ ಆಗಿರಬಹುದು.
ಸುಮಾರು 2.3ಕೆಜಿ. ಪರಿಶಿಷ್ಟ ಬಿ14 ನೋಡಿ.