ಎರಡನೇ ಸಮುವೇಲ 21:1-22

  • ಸೌಲನ ಕುಟುಂಬದವರ ಮೇಲೆ ಗಿಬ್ಯೋನ್ಯರ ಸೇಡು (1-14)

  • ಫಿಲಿಷ್ಟಿಯರ ವಿರುದ್ಧ ನಡೆದ ಯುದ್ಧಗಳು (15-22)

21  ದಾವೀದನ ಕಾಲದಲ್ಲಿ ಮೂರು ವರ್ಷ ಬಿಡದೆ ಬರಗಾಲ+ ಇತ್ತು. ಆಗ ದಾವೀದ ಯೆಹೋವನ ಹತ್ರ ಸಲಹೆ ಕೇಳಿದ. ಅದಕ್ಕೆ ಯೆಹೋವ “ಸೌಲನ ಮೇಲೆ, ಅವನ ಕುಟುಂಬದವ್ರ ಮೇಲೆ ರಕ್ತಾಪರಾಧ ಇದೆ. ಯಾಕಂದ್ರೆ ಅವರು ಗಿಬ್ಯೋನ್ಯರನ್ನ ಸಾಯಿಸಿದ್ರು”+ ಅಂದನು.  ಹಾಗಾಗಿ ರಾಜ ಗಿಬ್ಯೋನ್ಯರನ್ನ+ ಕರೆದು ಅವ್ರ ಜೊತೆ ಮಾತಾಡಿದ. (ಗಿಬ್ಯೋನ್ಯರು ಇಸ್ರಾಯೇಲ್ಯರಲ್ಲ. ಅಮೋರಿಯರಲ್ಲಿ+ ಉಳಿದವರು. ಇಸ್ರಾಯೇಲ್ಯರು ಗಿಬ್ಯೋನ್ಯರನ್ನ ಸಾಯಿಸಲ್ಲ ಅಂತ ಅವ್ರಿಗೆ ಮಾತು ಕೊಟ್ಟಿದ್ರು.+ ಆದ್ರೆ ಸೌಲ ಇಸ್ರಾಯೇಲಿನ, ಯೆಹೂದದ ಜನ್ರ ಮೇಲಿನ ಹುಚ್ಚು ಅಭಿಮಾನದಿಂದಾಗಿ ಗಿಬ್ಯೋನ್ಯರನ್ನ ಸಾಯಿಸೋಕೆ ಪ್ರಯತ್ನಿಸಿದ್ದ.)  ದಾವೀದ ಗಿಬ್ಯೋನ್ಯರಿಗೆ “ಹೇಳಿ, ನಾನು ನಿಮಗೋಸ್ಕರ ಏನು ಮಾಡ್ಲಿ? ಯೆಹೋವ ತನ್ನ ಜನ್ರನ್ನ ಆಶೀರ್ವದಿಸೋ ತರ ನೀವು ಬೇಡ್ಕೊಳ್ಳಬೇಕು. ಅದಕ್ಕಾಗಿ ಆಗಿಹೋಗಿರೋ ತಪ್ಪಿಗೆ ಪ್ರಾಯಶ್ಚಿತ್ತ ಮಾಡೋಕೆ ನಾನೇನು ಮಾಡಬೇಕು?” ಅಂತ ಕೇಳಿದ.  ಅದಕ್ಕೆ ಗಿಬ್ಯೋನ್ಯರು “ಸೌಲ, ಅವನ ಮನೆತನದವರು ನಮಗೆ ಮಾಡಿರೋ ನಷ್ಟವನ್ನ ಚಿನ್ನ, ಬೆಳ್ಳಿಯಿಂದ ಭರಿಸಕ್ಕಾಗಲ್ಲ.+ ಇಸ್ರಾಯೇಲ್ಯರಲ್ಲಿ ಯಾರನ್ನಾದ್ರೂ ಸಾಯಿಸೋ ಹಕ್ಕು ಸಹ ನಮಗಿಲ್ಲ” ಅಂದ್ರು. ಅದಕ್ಕೆ ಅವನು “ನೀವೇನೇ ಹೇಳಿದ್ರೂ ನಿಮಗಾಗಿ ಅದನ್ನ ಮಾಡ್ತೀನಿ” ಅಂದ.  ಆಗ ಅವರು ರಾಜನಿಗೆ “ನಮ್ಮನ್ನ ನಾಶ ಮಾಡೋಕೆ, ಇಸ್ರಾಯೇಲ್‌ ಪ್ರಾಂತ್ಯದಿಂದ ನಮ್ಮನ್ನ ಸರ್ವನಾಶ ಮಾಡೋಕೆ ಸಂಚು ಹೂಡಿದ್ದವನ+  ವಂಶದವರಾದ ಏಳು ಗಂಡು ಮಕ್ಕಳನ್ನ ನಮ್ಮ ಕೈಗೆ ಒಪ್ಪಿಸು. ನಾವು ಅವ್ರ ಶವಗಳನ್ನ ಯೆಹೋವ ಆರಿಸ್ಕೊಂಡಿದ್ದ ಸೌಲನ+ ಪಟ್ಟಣವಾಗಿರೋ ಗಿಬೆಯಾದಲ್ಲಿ+ ಯೆಹೋವನ ಮುಂದೆ ನೇತುಹಾಕ್ತೀವಿ”*+ ಅಂದ್ರು. ಅದಕ್ಕೆ ರಾಜ “ನಾನು ಅವ್ರನ್ನ ನಿಮ್ಮ ಕೈಗೆ ಒಪ್ಪಿಸ್ತೀನಿ” ಅಂದ.  ಆದ್ರೆ ರಾಜ ದಾವೀದ ಯೋನಾತಾನನ ಮಗ ಸೌಲನ ಮೊಮ್ಮಗ ಮೆಫೀಬೋಶೆತನಿಗೆ+ ಸಹಾನುಭೂತಿ ತೋರಿಸಿದ. ಯಾಕಂದ್ರೆ ದಾವೀದ, ಯೋನಾತಾನ+ ಯೆಹೋವನ ಮುಂದೆ ಒಬ್ರಿಗೊಬ್ರು ಮಾತು ಕೊಟ್ಟಿದ್ರು.  ಆದ್ರೆ ರಾಜ ಅಯ್ಯಾಹನ ಮಗಳಾದ ರಿಚ್ಪಳಲ್ಲಿ+ ಸೌಲನಿಗೆ ಹುಟ್ಟಿದ್ದ ಅರ್ಮೋನೀ ಮತ್ತು ಮೆಫೀಬೋಶೆತ್‌ ಅನ್ನೋ ಇಬ್ರು ಗಂಡು ಮಕ್ಕಳನ್ನ, ಸೌಲನ ಮಗಳಾದ ಮೀಕಲಳ*+ ಐದು ಗಂಡು ಮಕ್ಕಳನ್ನ ತಗೊಂಡ. ಈ ಮಕ್ಕಳು ಮೆಹೋಲದ ಬರ್ಜಿಲೈ ಮಗನಾದ ಅದ್ರೀಯೇಲ್‌ಗೆ+ ಹುಟ್ಟಿದ್ರು.  ಆಮೇಲೆ ರಾಜ ಆ ಏಳು ಜನ್ರನ್ನ ಗಿಬ್ಯೋನ್ಯರ ಕೈಗೆ ಒಪ್ಪಿಸಿದ. ಗಿಬ್ಯೋನ್ಯರು ಅವ್ರನ್ನ ಕೊಂದು ಅವ್ರ ಶವಗಳನ್ನ ಬೆಟ್ಟದ ಮೇಲೆ ತಗೊಂಡು ಹೋಗಿ ಯೆಹೋವನ ಮುಂದೆ ನೇತುಹಾಕಿದ್ರು.+ ಹೀಗೆ ಆ ಏಳು ಜನ್ರನ್ನ ಒಟ್ಟಿಗೆ ಕೊಯ್ಲಿನ ಮೊದಲ್ನೇ ದಿನಗಳಲ್ಲಿ ಅಂದ್ರೆ ಬಾರ್ಲಿ* ಕೊಯ್ಲಿನ ಆರಂಭದಲ್ಲಿ ಸಾಯಿಸಿದ್ರು. 10  ಆಮೇಲೆ ಅಯ್ಯಾಹನ ಮಗಳಾದ ರಿಚ್ಪ+ ಗೋಣಿ ತಗೊಂಡು ಅದನ್ನ ಬಂಡೆ ಮೇಲೆ ಹಾಸಿ ಅದ್ರ ಮೇಲೆ ಕೂತಳು. ಕೊಯ್ಲಿನ ಕಾಲದ ಆರಂಭದಿಂದ ಹಿಡಿದು ಶವಗಳ ಮೇಲೆ ಆಕಾಶದಿಂದ ಮಳೆ ಬೀಳೋ ತನಕ ಹಾಗೇ ಕೂತಿದ್ದಳು. ಹಗಲಲ್ಲಿ ಪಕ್ಷಿಗಳು ಶವಗಳ ಮೇಲೆ ಬಂದು ಕೂರದ ಹಾಗೆ, ರಾತ್ರಿಯಲ್ಲಿ ಕಾಡುಪ್ರಾಣಿಗಳು ಶವಗಳ ಹತ್ರ ಬರದ ಹಾಗೆ ರಿಚ್ಪ ನೋಡ್ಕೊಂಡಳು. 11  ಅಯ್ಯಾಹನ ಮಗಳೂ ಸೌಲನ ಉಪಪತ್ನಿಯೂ ಆಗಿದ್ದ ರಿಚ್ಪ ಮಾಡಿದ್ದನ್ನ ದಾವೀದನಿಗೆ ಹೇಳಿದ್ರು. 12  ಆಗ ದಾವೀದ ಯಾಬೆಷ್‌-ಗಿಲ್ಯಾದಿಗೆ+ ಹೋಗಿ ಅಲ್ಲಿನ ಹಿರಿಯರಿಂದ* ಸೌಲನ, ಅವನ ಮಗನಾದ ಯೋನಾತಾನನ ಮೂಳೆಗಳನ್ನ ತಗೊಂಡು ಬಂದ. ಫಿಲಿಷ್ಟಿಯರು ಯಾವ ದಿನ ಸೌಲನನ್ನ ಗಿಲ್ಬೋವದಲ್ಲಿ+ ಸಾಯಿಸಿದ್ರೋ ಅದೇ ದಿನ ಸೌಲನ, ಯೋನಾತಾನನ ಶವಗಳನ್ನ ಬೇತ್‌-ಷಾನ್‌ ಪಟ್ಟಣದ ಮುಖ್ಯ ಸ್ಥಳದಲ್ಲಿ* ನೇತುಹಾಕಿದ್ರು. ಆಮೇಲೆ ಯಾಬೆಷ್‌ ಗಿಲ್ಯಾದಿನ ಹಿರಿಯರು ಯಾರಿಗೂ ಗೊತ್ತಾಗದ ಹಾಗೆ ಬೇತ್‌-ಷಾನಿಗೆ ಹೋಗಿ ಆ ಶವಗಳನ್ನ ತಮ್ಮ ಊರಿಗೆ ತಂದಿದ್ರು. 13  ದಾವೀದ ಸೌಲನ, ಅವನ ಮಗನಾದ ಯೋನಾತಾನನ ಮೂಳೆಗಳನ್ನ ತಂದ. ಗಿಬ್ಯೋನ್ಯರು ಸಾಯಿಸಿ ನೇತುಹಾಕಿದ್ದ* ಆ ಏಳು ಜನ್ರ ಮೂಳೆಗಳನ್ನ ಸಹ ಸೇರಿಸಿದ್ರು.+ 14  ಆಮೇಲೆ ಅವರು ಸೌಲನ, ಅವನ ಮಗನಾದ ಯೋನಾತಾನನ ಮೂಳೆಗಳನ್ನ ಸೌಲನ ತಂದೆಯಾದ ಕೀಷನ+ ಸಮಾಧಿಯಲ್ಲಿ ಹೂಣಿಟ್ರು. ಅದು ಬೆನ್ಯಾಮೀನ್ಯರ ಪ್ರದೇಶದಲ್ಲಿದ್ದ ಚೇಲಾ+ ಪಟ್ಟಣದಲ್ಲಿ ಇತ್ತು. ರಾಜ ಆಜ್ಞೆ ಕೊಟ್ಟಿದ್ದನ್ನೆಲ್ಲ ಗಿಬ್ಯೋನ್ಯರು ಮಾಡಿದ್ರು. ಆಮೇಲೆ ದೇವರು ಅವ್ರ ಪ್ರಾರ್ಥನೆ ಕೇಳಿಸ್ಕೊಂಡು ದೇಶದ ಮೇಲೆ ಕರುಣೆ ತೋರಿಸಿದನು.+ 15  ಫಿಲಿಷ್ಟಿಯರ ಮತ್ತು ಇಸ್ರಾಯೇಲ್ಯರ ಮಧ್ಯ ಮತ್ತೆ ಯುದ್ಧ ಆಯ್ತು.+ ಹಾಗಾಗಿ ದಾವೀದ, ಅವನ ಸೇವಕರು ಫಿಲಿಷ್ಟಿಯರ ವಿರುದ್ಧ ಯುದ್ಧಕ್ಕೆ ಹೋದ್ರು. ಆದ್ರೆ ದಾವೀದನಿಗೆ ಯುದ್ಧ ಮಾಡಿ ಮಾಡಿ ಸುಸ್ತಾಯ್ತು. 16  ಫಿಲಿಷ್ಟಿಯರ ಸೈನ್ಯದಲ್ಲಿ ರೆಫಾಯರ+ ವಂಶಕ್ಕೆ ಸೇರಿದ ಒಬ್ಬ ಇದ್ದ. ಅವನ ಹೆಸ್ರು ಇಷ್ಬೀಬೆನೋಬ್‌. ಅವನ ತಾಮ್ರದ ಈಟಿಯ ತೂಕ 300 ಶೆಕೆಲ್‌*+ ಆಗಿತ್ತು, ಅವನ ಹತ್ರ ಒಂದು ಹೊಸ ಕತ್ತಿನೂ ಇತ್ತು. ಅವನು ದಾವೀದನನ್ನ ಸಾಯಿಸೋಕೆ ಪ್ರಯತ್ನಿಸಿದ. 17  ಕೂಡ್ಲೇ ಚೆರೂಯಳ ಮಗನಾದ ಅಬೀಷೈ+ ದಾವೀದನ ಸಹಾಯಕ್ಕೆ ಬಂದು+ ಆ ಫಿಲಿಷ್ಟಿಯನನ್ನ ಸಾಯಿಸಿದ. ಆಗ ದಾವೀದನಿಗೆ ಅವನ ಸೇವಕರು “ಇಸ್ರಾಯೇಲಿನ ದೀಪ ಆರಿಹೋಗೋದು ನಮಗಿಷ್ಟ ಇಲ್ಲ.+ ಇನ್ನು ಮುಂದೆ ನಾವು ನಿನ್ನನ್ನ ಯುದ್ಧಕ್ಕೆ ಕರ್ಕೊಂಡು ಹೋಗಲ್ಲ!”+ ಅಂತ ಮಾತು ಕೊಟ್ರು. 18  ಇದಾದ ಮೇಲೆ ಇನ್ನೊಮ್ಮೆ ಫಿಲಿಷ್ಟಿಯರ+ ಜೊತೆ ಗೋಬ್‌ ಅನ್ನೋ ಜಾಗದಲ್ಲಿ ಯುದ್ಧ ನಡಿತು. ಆಗ ಹುಷಾತ್ಯನಾಗಿದ್ದ ಸಿಬ್ಕೈ+ ರೆಫಾಯರ+ ವಂಶಕ್ಕೆ ಸೇರಿದ ಸಫ್‌ ಅನ್ನು ಸಾಯಿಸಿದ. 19  ಆಮೇಲೆ ಇನ್ನೊಂದು ಸಲ ಗೋಬಿನಲ್ಲಿ ಫಿಲಿಷ್ಟಿಯರ ವಿರುದ್ಧ ಯುದ್ಧ ನಡಿತು.+ ಆಗ ಬೆತ್ಲೆಹೇಮಿನ ಯಾರೇಯೋರೆಗೀಮನ ಮಗ ಎಲ್ಹಾನಾನ ಗತ್‌ ಊರಿನ ಗೊಲ್ಯಾತನನ್ನ ಸಾಯಿಸಿದ. ಈ ಗೊಲ್ಯಾತನ ಈಟಿಯ ಹಿಡಿ ಮಗ್ಗ ನೇಯುವವರ ಹಿಡಿ ತರ ಇತ್ತು.+ 20  ಗತ್‌ ಊರಲ್ಲಿ ಇನ್ನೊಂದು ಸಲ ಯುದ್ಧ ನಡಿತು. ಫಿಲಿಷ್ಟಿಯರ ಸೇನೆಯಲ್ಲಿ ಒಬ್ಬ ತುಂಬಾ ಎತ್ತರವಾದ ವ್ಯಕ್ತಿ ಇದ್ದ. ಅವನ ಕೈಕಾಲುಗಳಲ್ಲಿ ಆರಾರು ಬೆರಳಿತ್ತು, ಅಂದ್ರೆ ಒಟ್ಟು ಅವನಿಗೆ 24 ಬೆರಳು ಇತ್ತು. ಅವನು ಸಹ ರೆಫಾಯರ ವಂಶಕ್ಕೆ ಸೇರಿದವ.+ 21  ಅವನು ಇಸ್ರಾಯೇಲ್ಯರನ್ನ ಕೆಣಕಿ ಮಾತಾಡ್ತಾ+ ಇದ್ದದ್ರಿಂದ ದಾವೀದನ ಸಹೋದರನಾಗಿದ್ದ ಶಿಮ್ಮಿಯ+ ಮಗ ಯೋನಾತಾನ ಅವನನ್ನ ಸಾಯಿಸಿದ. 22  ರೆಫಾಯರ ವಂಶಕ್ಕೆ ಸೇರಿದ ಈ ನಾಲ್ಕೂ ಜನ ಗತ್‌ ಊರಲ್ಲಿ ಇದ್ರು. ಇವರು ದಾವೀದನ, ಅವನ ಸೇವಕರ ಕೈಯಿಂದ ಪ್ರಾಣ ಕಳ್ಕೊಂಡ್ರು.+

ಪಾದಟಿಪ್ಪಣಿ

ಅಕ್ಷ. “ಪ್ರದರ್ಶಿಸ್ತೀವಿ.” ಅಂದ್ರೆ, ಕೈಕಾಲು ಮುರಿದು ನೇತುಹಾಕ್ತೀವಿ.
ಬಹುಶಃ, “ಮೇರಬ.”
ಅಥವಾ “ಜವೆಗೋದಿ.”
ಬಹುಶಃ, “ಭೂಮಾಲೀಕರಿಂದ.”
ಅಕ್ಷ. “ಪ್ರದರ್ಶನಕ್ಕೆ ಇಟ್ಟಿದ್ದ.”
ಸುಮಾರು 3.42 ಕೆಜಿ. ಪರಿಶಿಷ್ಟ ಬಿ14 ನೋಡಿ.