ಎರಡನೇ ಸಮುವೇಲ 3:1-39

  • ದಾವೀದನ ಅಧಿಕಾರ ಜಾಸ್ತಿಯಾಗ್ತಾ ಹೋಯ್ತು (1)

  • ದಾವೀದನ ಗಂಡು ಮಕ್ಕಳು (2-5)

  • ಅಬ್ನೇರ ದಾವೀದನ ಪಕ್ಷ ಸೇರಿದ (6-21)

  • ಯೋವಾಬ ಅಬ್ನೇರನನ್ನ ಕೊಂದ (22-30)

  • ದಾವೀದ ಅಬ್ನೇರನಿಗಾಗಿ ಗೋಳಾಡಿದ (31-39)

3  ಸೌಲ ಮತ್ತು ದಾವೀದನ ಮನೆತನಗಳ ಮಧ್ಯ ತುಂಬ ದಿನ ಯುದ್ಧ ನಡಿತು. ದಿನೇ ದಿನೇ ದಾವೀದನ ಅಧಿಕಾರ ಜಾಸ್ತಿ ಆಗ್ತಾ ಹೋಯ್ತು.+ ಸೌಲನ ಕಡೆಯವ್ರ ಅಧಿಕಾರ ಕಡಿಮೆ ಆಗ್ತಾ ಹೋಯ್ತು.+  ಅದೇ ಸಮಯದಲ್ಲಿ ಹೆಬ್ರೋನಲ್ಲಿ+ ದಾವೀದನಿಗೆ ಗಂಡು ಮಕ್ಕಳು ಹುಟ್ಟಿದ್ರು. ಮೊದಲ್ನೇ ಮಗ ಅಮ್ನೋನ.+ ಇವನು ಇಜ್ರೇಲ್‌ನ ಅಹೀನೋವಮಗೆ+ ಹುಟ್ಟಿದ.  ಎರಡ್ನೇ ಮಗ ಕಿಲಾಬ.* ಇವನು ತೀರಿಹೋಗಿದ್ದ ಕರ್ಮೆಲಿನ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಗೆ+ ಹುಟ್ಟಿದ. ಮೂರನೇ ಮಗ ಅಬ್ಷಾಲೋಮ.+ ಇವನು ಗೆಷೂರಿನ ರಾಜನಾದ ತಲ್ಮೈಯ+ ಮಗಳಾದ ಮಾಕಾಗೆ ಹುಟ್ಟಿದ.  ನಾಲ್ಕನೇ ಮಗ ಹಗ್ಗೀತಳಿಗೆ ಹುಟ್ಟಿದ ಅದೋನೀಯ.+ ಐದನೇ ಮಗ ಅಬೀಟಲಳಿಗೆ ಹುಟ್ಟಿದ ಶೆಫಟ್ಯ.  ಆರನೇ ಮಗ ಎಗ್ಲಳಿಗೆ ಹುಟ್ಟಿದ ಇತ್ರಾಮ. ಇವರೇ ಹೆಬ್ರೋನಲ್ಲಿ ದಾವೀದನಿಗೆ ಹುಟ್ಟಿದ ಗಂಡು ಮಕ್ಕಳು.  ಸೌಲ ಮತ್ತು ದಾವೀದನ ಮನೆತನಗಳ ಮಧ್ಯ ಯುದ್ಧ ನಡಿತಾ ಇದ್ದ ಹಾಗೆ ಅಬ್ನೇರ+ ಸೌಲನ ಮನೆತನದಲ್ಲಿ ತನ್ನ ಸ್ಥಾನವನ್ನ ಬಲಪಡಿಸ್ಕೊಂಡ.  ಸೌಲನಿಗೆ ಒಬ್ಬ ಉಪಪತ್ನಿ ಇದ್ದಳು. ಅವಳ ಹೆಸ್ರು ರಿಚ್ಪ.+ ಅವಳು ಅಯ್ಯಾಹನ ಮಗಳು. ಒಂದಿನ ಈಷ್ಬೋಶೆತ+ ಅಬ್ನೇರನಿಗೆ “ನೀನು ನನ್ನ ಅಪ್ಪನ ಉಪಪತ್ನಿ ಜೊತೆ ಯಾಕೆ ಸಂಬಂಧ ಇಟ್ಕೊಂಡಿದ್ಯಾ?”+ ಅಂತ ಕೇಳಿದ.  ಆಗ ಅಬ್ನೇರನಿಗೆ ಎಲ್ಲಿಲ್ಲದ ಕೋಪ ಬಂತು. ಅವನು “ನಾನೇನು ಯೆಹೂದದ ನಾಯಿನಾ? ಇವತ್ತಿನ ತನಕ ನಿನ್ನ ತಂದೆಯಾದ ಸೌಲನ ಮನೆಗೆ, ಅವನ ಸಹೋದರರಿಗೆ, ಅವನ ಸ್ನೇಹಿತರಿಗೆ ನಿಷ್ಠೆ ತೋರಿಸಿದ್ದೀನಿ. ನಿನ್ನನ್ನ ದಾವೀದನ ಕೈಗೆ ಒಪ್ಪಿಸಿ ನಂಬಿಕೆದ್ರೋಹ ಮಾಡಲಿಲ್ಲ. ಹಾಗಿದ್ರೂ ನಾನು ಒಬ್ಬ ಹೆಂಗಸಿನ ಜೊತೆ ಸಂಬಂಧ ಇಟ್ಕೊಂಡಿದ್ದೀನಿ ಅಂತ ಆರೋಪ ಹಾಕ್ತೀಯಾ?  ಯೆಹೋವ ದಾವೀದನಿಗೆ ಮಾತು ಕೊಟ್ಟ ಹಾಗೆ ನಾನು ದಾವೀದನ ಜೊತೆ ನಡ್ಕೊಳ್ಳದೇ ಇದ್ರೆ ಅಬ್ನೇರನಾದ ನನಗೆ ದೇವರು ದೊಡ್ಡ ಶಿಕ್ಷೆ ಕೊಡ್ಲಿ.+ 10  ದೇವರು ರಾಜ್ಯವನ್ನ ಸೌಲನ ಮನೆತನದಿಂದ ದಾವೀದನಿಗೆ ಕೊಡ್ತೀನಿ, ದಾನಿಂದ ಬೇರ್ಷೆಬ ತನಕ+ ಇಸ್ರಾಯೇಲಿನ ಮೇಲೆ, ಯೆಹೂದದ ಮೇಲೆ ದಾವೀದನ ಸಿಂಹಾಸನವನ್ನ ಸ್ಥಾಪಿಸ್ತೀನಿ ಅಂತ ಮಾತು ಕೊಟ್ಟಿದ್ದನು” ಅಂದ. 11  ಇದಕ್ಕೆ ಅಬ್ನೇರನಿಗೆ ಹೆದರಿ ಈಷ್ಬೋಶೆತ ತುಟಿಕ್‌ಪಿಟಿಕ್‌ ಅನ್ನಲಿಲ್ಲ.+ 12  ಕೂಡ್ಲೇ ಅಬ್ನೇರ ದಾವೀದನ ಹತ್ರ ಸಂದೇಶವಾಹಕರನ್ನ ಕಳಿಸಿ “ಈ ದೇಶ ಯಾರದು? ನೀನು ನನ್ನ ಜೊತೆ ಒಪ್ಪಂದ ಮಾಡ್ಕೊ. ಇಡೀ ಇಸ್ರಾಯೇಲನ್ನ ನಿನಗೆ ಬೆಂಬಲ ಕೊಡೋ ತರ ಮಾಡೋಕೆ ನನ್ನಿಂದ ಏನೆಲ್ಲ ಸಾಧ್ಯನೋ ಅದನ್ನೆಲ್ಲ ಮಾಡ್ತೀನಿ”*+ ಅಂದ. 13  ಅದಕ್ಕೆ ದಾವೀದ “ಸರಿ! ನಾನು ನಿನ್ನ ಜೊತೆ ಒಪ್ಪಂದ ಮಾಡ್ಕೊಳ್ತೀನಿ. ಆದ್ರೆ ನೀನು ಒಂದು ವಿಷ್ಯ ಮಾಡಬೇಕು. ಅದೇನಂದ್ರೆ ನೀನು ಬರುವಾಗ ಸೌಲನ ಮಗಳಾದ ಮೀಕಲಳನ್ನ+ ಕರ್ಕೊಂಡು ಬರಬೇಕು. ಕರ್ಕೊಂಡು ಬಂದಿಲ್ಲ ಅಂದ್ರೆ ನನ್ನ ಮುಖ ನೋಡಬೇಡ” ಅಂದ. 14  ಆಮೇಲೆ ದಾವೀದ ಸೌಲನ ಮಗ ಈಷ್ಬೋಶೆತನ+ ಹತ್ರ ಸಂದೇಶವಾಹಕರನ್ನ ಕಳಿಸಿ “ಫಿಲಿಷ್ಟಿಯರ 100 ಮುಂದೊಗಲನ್ನ* ತಂದ್ಕೊಟ್ಟು ವರಿಸಿದ ನನ್ನ ಹೆಂಡತಿಯಾದ ಮೀಕಲಳನ್ನ ನನಗೆ ಕೊಡು”+ ಅಂತ ಹೇಳಿಸಿದ. 15  ಹಾಗಾಗಿ ಈಷ್ಬೋಶೆತ ಮೀಕಲಳನ್ನ ಕರ್ಕೊಂಡು ಬರೋಕೆ ಅವಳ ಗಂಡನೂ ಲಯಿಷನ ಮಗನೂ ಆದ ಪಲ್ಟೀಯೇಲನ+ ಹತ್ರ ಜನ್ರನ್ನ ಕಳಿಸಿದ. 16  ಆದ್ರೆ ಅವಳ ಹಿಂದೆನೇ ಅವಳ ಗಂಡನೂ ಬಂದ. ಅಳ್ತಾ ಬಹುರೀಮ್‌+ ತನಕ ಬಂದ. ಆಗ ಅಬ್ನೇರ “ವಾಪಸ್‌ ಹೋಗು!” ಅಂದ. ಆಗ ಅವನು ವಾಪಸ್‌ ಹೋದ. 17  ಅದೇ ಸಮಯದಲ್ಲಿ ಅಬ್ನೇರ ಇಸ್ರಾಯೇಲಿನ ಹಿರಿಯರಿಗೆ “ದಾವೀದ ನಿಮ್ಮ ರಾಜ ಆಗಬೇಕು ಅಂತ ತುಂಬ ದಿನದಿಂದ ಆಸೆಪಡ್ತಿದ್ರಿ. 18  ಈಗ ಅವನನ್ನ ನಿಮ್ಮ ರಾಜನಾಗಿ ಮಾಡ್ಕೊಳ್ಳಿ. ಯಾಕಂದ್ರೆ ಯೆಹೋವ ದಾವೀದನಿಗೆ ‘ನನ್ನ ಜನ್ರಾದ ಇಸ್ರಾಯೇಲ್ಯರನ್ನ ಫಿಲಿಷ್ಟಿಯರ ಕೈಯಿಂದ, ಎಲ್ಲ ಶತ್ರುಗಳ ಕೈಯಿಂದ ನನ್ನ ಸೇವಕನಾದ ದಾವೀದನ ಮೂಲಕ ರಕ್ಷಿಸ್ತೀನಿ’+ ಅಂತ ಹೇಳಿದ್ದನು” ಅಂದ. 19  ಆಮೇಲೆ ಅಬ್ನೇರ ಬೆನ್ಯಾಮೀನ್‌+ ಜನ್ರ ಹತ್ರ ಮಾತಾಡಿದ. ಅಬ್ನೇರ ಹೆಬ್ರೋನಲ್ಲಿರೋ ದಾವೀದನ ಹತ್ರ ಹೋಗಿ ಇಸ್ರಾಯೇಲ್ಯರು, ಇಡೀ ಬೆನ್ಯಾಮೀನ್‌ ಮನೆತನದವರು ಒಪ್ಕೊಂಡ ವಿಷ್ಯವನ್ನ ಖಾಸಗಿಯಾಗಿ ಹೇಳಿದ. 20  ಅಬ್ನೇರ ತನ್ನ 20 ಗಂಡಸ್ರ ಜೊತೆ ಹೆಬ್ರೋನಲ್ಲಿರೋ ದಾವೀದನ ಹತ್ರ ಬಂದಾಗ ದಾವೀದ ಅಬ್ನೇರನಿಗಾಗಿ, ಅವನ ಜೊತೆ ಇದ್ದ ಗಂಡಸ್ರಿಗಾಗಿ ಔತಣ ಮಾಡಿಸಿದ. 21  ಆಮೇಲೆ ಅಬ್ನೇರ ದಾವೀದನಿಗೆ “ನಾನು ಹೋಗಿ ನನ್ನ ಒಡೆಯನಾದ ರಾಜನಿಗಾಗಿ ಇಡೀ ಇಸ್ರಾಯೇಲನ್ನ ಒಟ್ಟುಸೇರಿಸ್ತೀನಿ. ಆಗ ಅವರು ನನ್ನ ಜೊತೆ ಒಪ್ಪಂದ ಮಾಡ್ಕೊಳ್ಳೋಕೆ ಆಗುತ್ತೆ. ಆಗ ನೀನು ಇಡೀ ಇಸ್ರಾಯೇಲಿನ ರಾಜನಾಗ್ತೀಯ” ಅಂದ. ದಾವೀದ ಅಬ್ನೇರನನ್ನ ಕಳಿಸಿದ, ಅವನು ಸಮಾಧಾನದಿಂದ ಹೋದ. 22  ಸ್ವಲ್ಪ ಸಮಯದಲ್ಲೇ ದಾವೀದನ ಸೇವಕರು, ಯೋವಾಬ ದಾಳಿ ಮಾಡಿ ಸಿಕ್ಕಾಪಟ್ಟೆ ಕೊಳ್ಳೆ ತಗೊಂಡು ಬಂದ್ರು. ಅಷ್ಟರಲ್ಲಿ ಹೆಬ್ರೋನಲ್ಲಿದ್ದ ದಾವೀದನ ಹತ್ರದಿಂದ ಅಬ್ನೇರ ಹೋಗಿದ್ದ. ಯಾಕಂದ್ರೆ ದಾವೀದ ಅವನನ್ನ ಸಮಾಧಾನವಾಗಿ ಕಳಿಸಿ ಕೊಟ್ಟಿದ್ದ. 23  ಯೋವಾಬ+ ತನ್ನ ಸೈನಿಕರ ಜೊತೆ ಅಲ್ಲಿಗೆ ಬಂದಾಗ ಯೋವಾಬನಿಗೆ “ನೇರನ+ ಮಗ ಅಬ್ನೇರ+ ರಾಜನ ಹತ್ರ ಬಂದಿದ್ದ. ರಾಜ ಅವನನ್ನ ಕಳಿಸಿಬಿಟ್ಟ. ಅವನು ಸಮಾಧಾನದಿಂದ ತನ್ನ ದಾರಿ ಹಿಡಿದು ಹೋದ” ಅಂತ ಯಾರೋ ಹೇಳಿದ್ರು. 24  ಆಗ ಯೋವಾಬ ರಾಜನ ಹತ್ರ ಹೋಗಿ “ನೀನ್ಯಾಕೆ ಹೀಗೆ ಮಾಡಿದೆ? ಅಬ್ನೇರ ನಿನ್ನ ಹತ್ರ ಬಂದ್ರೂ ಏನೂ ಮಾಡ್ದೆ ಸುಮ್ನೆ ಕಳಿಸಿಬಿಟ್ಟೆ. 25  ನೇರನ ಮಗ ಅಬ್ನೇರ ಎಂಥವನು ಅಂತ ನಿನಗೇ ಗೊತ್ತು. ಅವನು ನಿನ್ನನ್ನ ಮೋಸ ಮಾಡೋಕೆ, ನಿನ್ನ ಒಂದೊಂದು ಹೆಜ್ಜೆ ತಿಳ್ಕೊಳ್ಳೋಕೆ ಬಂದಿದ್ದ” ಅಂದ. 26  ಯೋವಾಬ ಅಲ್ಲಿಂದ ಹೋಗಿ ಅಬ್ನೇರನ ಹಿಂದೆ ಜನ್ರನ್ನ ಕಳಿಸಿದ. ಅವರು ಅಬ್ನೇರನನ್ನ ಸಿರಾ ಬಾವಿ ಹತ್ರದಿಂದ ಕರ್ಕೊಂಡು ಬಂದ್ರು. ಇದ್ರ ಬಗ್ಗೆ ದಾವೀದನಿಗೆ ಏನೂ ಗೊತ್ತಿರಲಿಲ್ಲ. 27  ಅಬ್ನೇರ ಹೆಬ್ರೋನಿಗೆ+ ವಾಪಸ್‌ ಬಂದಾಗ ಯೋವಾಬ ಅವನ ಜೊತೆ ಗುಟ್ಟಾಗಿ ಮಾತಾಡೋಕೆ ಪಟ್ಟಣದ ಬಾಗಿಲ ಒಳಗೆ ಕರ್ಕೊಂಡು ಹೋದ. ಅಲ್ಲಿ ಅಬ್ನೇರನ ಹೊಟ್ಟೆಗೆ ತಿವಿದು ಕೊಂದು ಬಿಟ್ಟ.+ ಹೀಗೆ ತನ್ನ ಸಹೋದರನಾದ ಅಸಾಹೇಲನನ್ನ ಅಬ್ನೇರ ಕೊಂದದ್ದಕ್ಕೆ ಸೇಡು ತೀರಿಸ್ಕೊಂಡ.+ 28  ಆಮೇಲೆ ದಾವೀದನಿಗೆ ಈ ವಿಷ್ಯ ಗೊತ್ತಾದಾಗ “ನೇರನ ಮಗ ಅಬ್ನೇರನ ಕೊಲೆ ವಿಷ್ಯದಲ್ಲಿ ನಾನು, ನನ್ನ ಜನ್ರು ಯಾವಾಗ್ಲೂ ಯೆಹೋವನ ಮುಂದೆ ನಿರಪರಾಧಿಗಳು.+ 29  ಈ ಅಪರಾಧ ಯೋವಾಬನ ತಲೆ ಮೇಲೆ,+ ಅವನ ತಂದೆಯ ಇಡೀ ಮನೆತನದ ಮೇಲೆ ಬರಲಿ. ಜನನಾಂಗಗಳಿಂದ ಸ್ರಾವವಾಗೋ,+ ಕುಷ್ಠವಿರೋ,+ ಕುಂಟರಾಗಿರೋ,* ಕತ್ತಿಯಿಂದ ಸಾಯೋ ಅಥವಾ ಊಟಕ್ಕಾಗಿ ಬೇಡೋ+ ಗಂಡಸ್ರು ಯೋವಾಬನ ಮನೇಲಿ ಇದ್ದೇ ಇರಲಿ!” ಅಂದ. 30  ಯೋವಾಬ, ಅವನ ಸಹೋದರನಾದ ಅಬೀಷೈ+ ಅಬ್ನೇರನನ್ನ+ ಕೊಲ್ಲೋಕೆ ಕಾರಣ ಏನಂದ್ರೆ ಅಬ್ನೇರ ಗಿಬ್ಯೋನಲ್ಲಿ ನಡೆದ ಯುದ್ಧದಲ್ಲಿ ಅವ್ರ ಸಹೋದರನಾದ ಅಸಾಹೇಲನನ್ನ ಕೊಂದಿದ್ದ.+ 31  ಆಮೇಲೆ ದಾವೀದ ಯೋವಾಬನಿಗೆ, ಅವನ ಜೊತೆ ಇದ್ದ ಎಲ್ಲ ಜನ್ರಿಗೆ “ನಿಮ್ಮ ಬಟ್ಟೆಗಳನ್ನ ಹರ್ಕೊಂಡು, ಗೋಣಿ ಸುತ್ಕೊಂಡು ಅಬ್ನೇರನಿಗಾಗಿ ಗೋಳಾಡಿ” ಅಂದ. ಸ್ವತಃ ರಾಜ ದಾವೀದನೇ ಅಬ್ನೇರನ ಚಟ್ಟದ ಹಿಂದೆ ನಡ್ಕೊಂಡು ಹೋದ. 32  ಅವರು ಅಬ್ನೇರನನ್ನ ಹೆಬ್ರೋನಲ್ಲಿ ಸಮಾಧಿ ಮಾಡಿದ್ರು. ಅಬ್ನೇರನ ಸಮಾಧಿ ಹತ್ರ ರಾಜ ಜೋರಾಗಿ ಅತ್ತ. ಎಲ್ಲ ಜನ್ರೂ ಅತ್ರು. 33  ಅಬ್ನೇರನ ಬಗ್ಗೆ ರಾಜ ಹೀಗೆ ಹಾಡಿದ, “ಮೂರ್ಖರಿಗೆ ಬರೋ ಸಾವು ಅಬ್ನೇರನಿಗೆ ಬರಬೇಕಿತ್ತಾ? 34  ನಿನ್ನ ಕೈಗಳನ್ನ ಕಟ್ಟಿಹಾಕಿರಲಿಲ್ಲ,ಕಾಲುಗಳಿಗೆ ಸಂಕೋಲೆ* ಬಿಗಿದಿರಲಿಲ್ಲ. ಅಪರಾಧಿಗಳ* ಕೈಯಲ್ಲಿ ಸಾಯೋ ತರ ಸತ್ತುಹೋದೆ.”+ ಇದನ್ನ ಕೇಳಿ ಜನ್ರೆಲ್ಲ ಅವನಿಗಾಗಿ ಮತ್ತೆ ಅತ್ರು. 35  ಇನ್ನೂ ಬೆಳಕಿರುವಾಗ್ಲೇ ಜನ್ರೆಲ್ಲ ದಾವೀದನನ್ನ ಸಮಾಧಾನ ಮಾಡೋಕೆ ರೊಟ್ಟಿ* ತಗೊಂಡು ಹೋದ್ರು. ಆದ್ರೆ ದಾವೀದ “ರೊಟ್ಟಿ ಆಗಲಿ, ಬೇರೆ ಏನೇ ಆಗಲಿ ಸೂರ್ಯ ಮುಳುಗೋ ಮುಂಚೆನೇ ನಾನು ತಿಂದ್ರೆ ದೇವರು ನನಗೆ ಶಿಕ್ಷೆ ಕೊಡ್ಲಿ!”+ ಅಂತ ಪ್ರಮಾಣ ಮಾಡಿದ್ದ. 36  ಇದನ್ನೆಲ್ಲ ಜನ ನೋಡಿ ರಾಜನನ್ನ ಮೆಚ್ಚಿದ್ರು. ರಾಜ ಮಾಡಿದ ಬೇರೆ ಎಲ್ಲ ವಿಷ್ಯಗಳನ್ನ ಜನ್ರು ಮೆಚ್ಚಿದ್ರು. 37  ಹೀಗೆ ಅವತ್ತು ಎಲ್ಲ ಜನ್ರಿಗೆ, ಇಸ್ರಾಯೇಲ್ಯರಿಗೆ ನೇರನ ಮಗ ಅಬ್ನೇರನ ಸಾವಿಗೆ ರಾಜ ಕಾರಣನಲ್ಲ ಅಂತ ಗೊತ್ತಾಯ್ತು.+ 38  ಆಮೇಲೆ ರಾಜ ತನ್ನ ಸೇವಕರಿಗೆ “ಇವತ್ತು ಇಸ್ರಾಯೇಲಲ್ಲಿ ಒಬ್ಬ ನಾಯಕ, ಒಬ್ಬ ಮಹಾಪುರುಷ ಸತ್ತುಹೋದ.+ 39  ರಾಜನಾಗಿ ಅಭಿಷೇಕ ಆಗಿದ್ರೂ+ ನನಗೆ ಇವತ್ತು ಶಕ್ತಿಯಿಲ್ಲ. ಯಾಕಂದ್ರೆ ಚೆರೂಯಳ+ ಈ ಗಂಡು ಮಕ್ಕಳು ನನ್ನ ಜೊತೆ ದಯೆ ಇಲ್ಲದೆ ನಡ್ಕೊಂಡಿದ್ದಾರೆ.+ ಯೆಹೋವ ಕೆಡುಕನಿಗೆ ಅವನ ಕೆಟ್ಟತನಕ್ಕೆ ಸರಿಯಾದ ಶಿಕ್ಷೆ ಕೊಡ್ತಾನೆ”+ ಅಂದ.

ಪಾದಟಿಪ್ಪಣಿ

1ಪೂರ್ವ 3:1ರಲ್ಲಿ “ದಾನಿಯೇಲ.”
ಅಕ್ಷ. “ನನ್ನ ಕೈ ನಿನ್ನ ಜೊತೆ ಇರುತ್ತೆ.”
ಅಂದ್ರೆ, “ಗಂಡಸಿನ ಜನನಾಂಗದ ತುದಿಯ ಚರ್ಮವನ್ನ.”
ಬಹುಶಃ, ಅಂಗವಿಕಲತೆ ಕಾರಣ ಸ್ತ್ರೀಯರು ಮಾಡೋ ಕೆಲಸವನ್ನ ಮಾಡೋ ಗಂಡಸ್ರನ್ನ ಸೂಚಿಸುತ್ತೆ.
ಅಕ್ಷ. “ತಾಮ್ರ.”
ಅಕ್ಷ. “ಅನೀತಿಯ ಪುತ್ರರು.”
ಅಥವಾ “ದುಃಖದ ರೊಟ್ಟಿ.”