ಎರಡನೇ ಸಮುವೇಲ 9:1-13

  • ಮೆಫೀಬೋಶೆತನಿಗೆ ದಾವೀದ ತೋರಿಸಿದ ಶಾಶ್ವತ ಪ್ರೀತಿ (1-13)

9  ಆಮೇಲೆ ದಾವೀದ “ಸೌಲನ ಕುಟುಂಬದಲ್ಲಿ ಯಾರಾದ್ರೂ ಜೀವಂತವಾಗಿ ಇದ್ದಾರಾ? ಇದ್ರೆ ಅವ್ರಿಗೆ ನಾನು ಯೋನಾತಾನನಿಗೋಸ್ಕರ ಶಾಶ್ವತ ಪ್ರೀತಿ ತೋರಿಸಬೇಕು”+ ಅಂದ.  ಸೌಲನ ಕುಟುಂಬದ ಸೇವಕನಾಗಿದ್ದ ಚೀಬ+ ಅಲ್ಲಿದ್ದ. ಹಾಗಾಗಿ ಅವನನ್ನ ದಾವೀದನ ಹತ್ರ ಕರೆದಾಗ ರಾಜ “ನೀನು ಚೀಬನಾ?” ಅಂತ ಕೇಳಿದಾಗ ಅವನು “ಹೌದು, ನಾನು ನಿನ್ನ ಸೇವಕ ಚೀಬ” ಅಂತ ಉತ್ತರ ಕೊಟ್ಟ.  ಆಗ ರಾಜ “ದೇವರು ತೋರಿಸುವಂಥ ಶಾಶ್ವತ ಪ್ರೀತಿನ ನಾನು ತೋರಿಸೋಕೆ ಸೌಲನ ಕುಟುಂಬದಲ್ಲಿ ಯಾರಾದ್ರೂ ಜೀವಂತವಾಗಿ ಇದ್ದಾರಾ?” ಅಂತ ಕೇಳಿದ. ಅದಕ್ಕೆ ಚೀಬ “ಯೋನಾತಾನನ ಒಬ್ಬ ಮಗ ಇನ್ನೂ ಇದ್ದಾನೆ. ಅವನು ಕುಂಟ”+ ಅಂದ.  ರಾಜ ಅವನಿಗೆ “ಅವನು ಎಲ್ಲಿದ್ದಾನೆ?” ಅಂತ ಕೇಳಿದ. ಅದಕ್ಕೆ ಚೀಬ “ಅವನು ಲೋದೆಬಾರಿನಲ್ಲಿ ಅಮ್ಮೀಯೇಲನ ಮಗ ಮಾಕೀರನ+ ಮನೇಲಿ ಇದ್ದಾನೆ” ಅಂದ.  ತಕ್ಷಣ ರಾಜ ದಾವೀದ ಮೆಫೀಬೋಶೆತನನ್ನ ಮಾಕೀರನ ಮನೆಯಿಂದ ಕರ್ಕೊಂಡು ಬರೋಕೆ ಜನ್ರನ್ನ ಕಳಿಸಿದ.  ಸೌಲನ ಮೊಮ್ಮಗ, ಯೋನಾತಾನನ ಮಗ ಮೆಫೀಬೋಶೆತ ದಾವೀದನ ಹತ್ರ ಬಂದಾಗ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ. ಆಗ ದಾವೀದ “ಮೆಫೀಬೋಶೆತ!” ಅಂತ ಕರೆದಾಗ ಅವನು “ಹೇಳಿ ಪ್ರಭು” ಅಂದ.  ಆಗ ದಾವೀದ “ಹೆದರಬೇಡ. ನಿನ್ನ ಅಪ್ಪ ಯೋನಾತಾನನಿಗೋಸ್ಕರ ನಾನು ಖಂಡಿತ ನಿನಗೆ ಶಾಶ್ವತ ಪ್ರೀತಿ+ ತೋರಿಸ್ತೀನಿ. ನಿನ್ನ ಅಜ್ಜ ಸೌಲನ ಎಲ್ಲ ಜಮೀನನ್ನ ನಾನು ನಿನಗೆ ವಾಪಸ್‌ ಕೊಡ್ತೀನಿ. ನೀನು ಇವತ್ತಿಂದ ನನ್ನ ಮೇಜಲ್ಲಿ ಊಟ ಮಾಡ್ತೀಯ”*+ ಅಂದ.  ಆಗ ಮೆಫೀಬೋಶೆತ ನಮಸ್ಕಾರ ಮಾಡಿ “ನಾನು ಏನೇನೂ ಅಲ್ಲ. ನಾನು ಒಂದು ಸತ್ತ ನಾಯಿಗೆ+ ಸಮ. ಆದ್ರೂ ನೀನು ನನ್ನ ಕಡೆ ಗಮನ ಕೊಟ್ಟಿದ್ದೀಯ” ಅಂದ.  ಆಗ ರಾಜ ದಾವೀದ ಸೌಲನ ಸೇವಕನಾದ ಚೀಬನನ್ನ ಕರೆದು “ಸೌಲನಿಗೆ, ಅವನ ಕುಟುಂಬಕ್ಕೆ ಸೇರಿದ ಎಲ್ಲವನ್ನ ನಾನು ನಿನ್ನ ಯಜಮಾನನ ಮೊಮ್ಮಗನಿಗೆ ಕೊಡ್ತೀನಿ.+ 10  ನೀನು, ನಿನ್ನ ಮಕ್ಕಳು, ನಿನ್ನ ಸೇವಕರು ಅವನಿಗಾಗಿ ಹೊಲದಲ್ಲಿ ಬೆಳೆ ಬೆಳಿತೀರ. ನಿನ್ನ ಯಜಮಾನನ ಮೊಮ್ಮಗನ ಕಡೆಯವ್ರಿಗೆ ಆಹಾರ ಕೊಡೋಕೆ ಅದ್ರ ಬೆಳೆನ ನೀನು ಒಟ್ಟುಗೂಡಿಸ್ತೀಯ. ಆದ್ರೆ ನಿನ್ನ ಯಜಮಾನನ ಮೊಮ್ಮಗ ಮೆಫೀಬೋಶೆತ್‌ ಯಾವಾಗ್ಲೂ ನನ್ನ ಮೇಜಿನ ಮೇಲೆ ಊಟ ಮಾಡ್ತಾನೆ”+ ಅಂತ ಹೇಳಿದ. ಚೀಬನಿಗೆ 15 ಗಂಡು ಮಕ್ಕಳು, 20 ಸೇವಕರು ಇದ್ರು.+ 11  ಆಮೇಲೆ ಚೀಬ ರಾಜನಿಗೆ “ನನ್ನ ಒಡೆಯನೇ, ರಾಜನೇ ನೀನು ಏನೆಲ್ಲ ಆಜ್ಞೆ ಕೊಡ್ತಿಯೋ ಅದನ್ನೆಲ್ಲ ನಾನು ಮಾಡ್ತೀನಿ” ಅಂದ. ಹಾಗಾಗಿ ಮೆಫೀಬೋಶೆತ್‌ ದಾವೀದನ* ಮೇಜಿನಲ್ಲಿ ರಾಜನ ಮಗನ ತರ ಊಟ ಮಾಡಿದ. 12  ಮೆಫೀಬೋಶೆತನಿಗೂ ಒಬ್ಬ ಮಗನಿದ್ದ. ಆ ಯುವಕನ ಹೆಸ್ರು ಮೀಕ.+ ಚೀಬನ ಮನೇಲಿ ಇದ್ದವ್ರೆಲ್ಲ ಮೆಫೀಬೋಶೆತನ ಸೇವಕರಾದ್ರು. 13  ಮೆಫೀಬೋಶೆತ ಯಾವಾಗ್ಲೂ ರಾಜನ ಮೇಜಲ್ಲಿ ಊಟ ಮಾಡಬೇಕಾಗಿದ್ರಿಂದ+ ಯೆರೂಸಲೇಮಲ್ಲೇ ಇದ್ದ. ಅವನ ಎರಡೂ ಕಾಲು ಕುಂಟಾಗಿತ್ತು.+

ಪಾದಟಿಪ್ಪಣಿ

ಅಕ್ಷ. “ರೊಟ್ಟಿ ತಿಂತೀಯ.”
ಬಹುಶಃ, “ನನ್ನ.”