ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೋವಿಡ್‌ ಸುಸ್ತು ನಿವಾರಣೆಗೆ ದಾರಿ

ಕೋವಿಡ್‌ ಸುಸ್ತು ನಿವಾರಣೆಗೆ ದಾರಿ

 ಕೋವಿಡ್‌-19ಗೆ ಹೆದರಿ ಹೆದರಿ ಜೀವನಮಾಡಿ ನಿಮಗೆ ಸಾಕಾಗಿ ಹೋಗಿದ್ಯಾ? ಸುಸ್ತಾಗಿ ಹೋಗಿದ್ಯಾ? ಹಾಗನಿಸೋದು ನಿಮ್ಮೊಬ್ಬರಿಗೆ ಮಾತ್ರ ಅಲ್ಲ. ಎಷ್ಟೋ ತಿಂಗಳಿಂದ ಪ್ರಪಂಚದಲ್ಲಿ ಜನರು ಕೋವಿಡ್‌-19ಗೆ ಹೆದರಿಕೊಂಡೇ ಬದುಕುತ್ತಿದ್ದಾರೆ. ತುಂಬ ಜನ “ಕೊರೋನ ವೈರಸ್‌ ಹರಡುವುದನ್ನು ನಿಲ್ಲಿಸಲು ದೊಡ್ಡ ದೊಡ್ಡ ತ್ಯಾಗಗಳನ್ನು ಮಾಡಿದ್ದಾರೆ. ಇಂಥ ಸಂದರ್ಭದಲ್ಲಿ ಅನೇಕರಿಗೆ ಯಾವುದರಲ್ಲೂ ಆಸಕ್ತಿ ಇಲ್ಲ, ಏನು ಮಾಡಲಿಕ್ಕೂ ಮನಸ್ಸಿಲ್ಲ. ಇದು ಸಹಜ. ಇದಕ್ಕೆ ಕೋವಿಡ್‌ ಸುಸ್ತು ಎಂದು ಹೆಸರು” ಅಂತ ಡಾಕ್ಟರ್‌ ಹಾನ್ಸ್‌ ಕ್ಲೂಗ ಹೇಳುತ್ತಾರೆ. ಇವರು ವಿಶ್ವ ಆರೋಗ್ಯ ಸಂಸ್ಥೆಯ ಯೂರೋಪ್‌ ಪ್ರಾದೇಶಿಕ ನಿರ್ದೇಶಕ.

 ಈ ಕೋವಿಡ್‌ ಸುಸ್ತು ನಿಮಗೂ ಇದ್ಯಾ? ಹಾಗಾದ್ರೆ ಭಯಪಡಬೇಡಿ, ಧೈರ್ಯವಾಗಿರಿ. ಈ ಒತ್ತಡ ನಿಭಾಯಿಸಲು ತುಂಬ ಜನರಿಗೆ ಬೈಬಲ್‌ ಸಹಾಯ ಮಾಡುತ್ತಿದೆ. ನಿಮಗೂ ಖಂಡಿತ ಸಹಾಯ ಮಾಡುತ್ತದೆ.

 ಕೋವಿಡ್‌ ಸುಸ್ತು ಅಂದರೇನು?

 ಇದೊಂದು ಕಾಯಿಲೆ ಅಲ್ಲ. ಕೋವಿಡಿಂದ ಜೀವನ ತಲೆಕೆಳಗೆ ಆದಾಗ, ‘ಇನ್ನೆಷ್ಟು ದಿನ ಹೀಗೇ ಇರುತ್ತೋ, ಇನ್ನು ಏನೇನು ಆಗುತ್ತೋ’ ಅನ್ನೋ ಚಿಂತೆ ಕಾಡುತ್ತದೆ. ಆಗ ಜನರಲ್ಲಾಗೋ ತಳಮಳವೇ ಕೋವಿಡ್‌ ಸುಸ್ತು. ಇದಕ್ಕೆ ಒಬ್ಬೊಬ್ಬರು ಒಂದೊಂದು ತರ ಪ್ರತಿಕ್ರಿಯೆ ತೋರಿಸುತ್ತಾರೆ ನಿಜ. ಆದರೆ ಕೋವಿಡ್‌ ಸುಸ್ತಿನ ಸಾಮಾನ್ಯ ಲಕ್ಷಣಗಳು ಯಾವುದೆಂದ್ರೆ,

  •   ಏನು ಮಾಡಲಿಕ್ಕೂ ಮನಸ್ಸಿಲ್ಲ

  •   ಊಟ ನಿದ್ದೆಯಲ್ಲಿ ಏರುಪೇರು

  •   ಕಿರಿಕಿರಿ

  •   ಮೊದಲು ಚೆನ್ನಾಗಿ ಮಾಡುತ್ತಿದ್ದ ಕೆಲಸವನ್ನು ಸಹ ಈಗ ಮಾಡೋದು ತುಂಬ ಕಷ್ಟ

  •   ಗಮನ ಕೊಡಲು ಕಷ್ಟ

  •   ಜೀವನದಲ್ಲಿ ಒಳ್ಳೇದು ಆಗಲ್ವೇನೋ ಎಂಬ ಅನಿಸಿಕೆ

 ಕೋವಿಡ್‌ ಸುಸ್ತು ಯಾಕೆ ದೊಡ್ಡ ಸಮಸ್ಯೆ?

 ಕೋವಿಡ್‌ ಸುಸ್ತನ್ನು ಹಾಗೇ ಬಿಟ್ಟರೆ ನಮಗೂ ಅಪಾಯ, ಬೇರೆಯವರಿಗೂ ಅಪಾಯ. ಕೋವಿಡ್‌ ಬರದಂತೆ ಸುರಕ್ಷಾ ಕ್ರಮಗಳನ್ನು ತಕ್ಕೊಳ್ಳಲು ಮನಸ್ಸು ಬರಲ್ಲ. ಅದನ್ನೆಲ್ಲ ಮೆಲ್ಲ ಮೆಲ್ಲ ಬಿಟ್ಟುಬಿಡುತ್ತೇವೆ. ಈ ವೈರಸ್‌ ಹರಡುತ್ತಾ ಎಷ್ಟೋ ಜನರ ಜೀವವನ್ನು ಬಲಿ ತಗೊಳ್ಳುತ್ತಿದ್ದರೂ ನಿರ್ಲಕ್ಷಿಸಿ ಬಿಡುತ್ತೇವೆ, ಜಾಗ್ರತೆ ವಹಿಸಲ್ಲ. ನಿರ್ಬಂಧಗಳನ್ನು ಪಾಲಿಸಿ ಪಾಲಿಸಿ ಸಾಕಾಗಿ ಹೋಗಿ ‘ಇದೆಲ್ಲ ಏನೂ ಬೇಡಪ್ಪ’ ಅಂತ ಅಂದುಕೊಳ್ಳಬಹುದು. ಆದರೆ ಇದರಿಂದ ಎಲ್ಲರಿಗೂ ಹಾನಿ.

 ಈ ಒತ್ತಡದ ಸಮಯದಲ್ಲಿ ತುಂಬ ಜನರಿಗೆ ಬೈಬಲಲ್ಲಿರುವ ಈ ಮಾತು ನಿಜ ಅಂತ ಅರ್ಥ ಆಗಿದೆ: “ಕಷ್ಟ ಬಂದಾಗ ಧೈರ್ಯ ಕಳ್ಕೊಂಡ್ರೆ ಇರೋ ಬಲನೂ ಹೋಗುತ್ತೆ.” (ಜ್ಞಾನೋಕ್ತಿ 24:10) ಇಂಥ ಸನ್ನಿವೇಶದಲ್ಲಿ ಧೈರ್ಯ ಕಳಕೊಳ್ಳದಿರಲು ಬೈಬಲಲ್ಲಿರುವ ಬುದ್ಧಿಮಾತುಗಳು ಸಹಾಯ ಮಾಡುತ್ತವೆ.

 ಇದನ್ನು ನಿಭಾಯಿಸಲು ಬೈಬಲ್‌ ಹೇಗೆ ಸಹಾಯ ಮಾಡುತ್ತದೆ?

  •   ಒಬ್ಬರಿಂದ ಒಬ್ಬರು ದೂರ ಇರಿ, ಆದರೆ ಮನಸ್ಸಿಗೆ ಹತ್ತಿರವಾಗಿರಿ

     ಬೈಬಲ್‌ ಹೀಗೆ ಹೇಳುತ್ತದೆ: ‘ನಿಜವಾದ ಸ್ನೇಹಿತ ಕಷ್ಟಕಾಲದಲ್ಲಿ ಸಹೋದರನಾಗ್ತಾನೆ.’—ಜ್ಞಾನೋಕ್ತಿ 17:17.

     ಯಾಕೆ ಮುಖ್ಯ? ನಿಜ ಸ್ನೇಹಿತರು ಒಬ್ಬರು ಇನ್ನೊಬ್ಬರನ್ನು ಬಲಪಡಿಸುತ್ತಾರೆ. (1 ಥೆಸಲೊನೀಕ 5:11) ಯಾರ ಜೊತೆನೂ ಸೇರದೆ ತುಂಬ ದಿನ ಒಂಟಿಯಾಗಿ ಇರುವುದು ನಮ್ಮ ಆರೋಗ್ಯಕ್ಕೆ ಒಳ್ಳೇದಲ್ಲ.—ಜ್ಞಾನೋಕ್ತಿ 18:1.

     ಹೀಗೆ ಮಾಡಿ: ನಿಮ್ಮ ಫ್ರೆಂಡ್ಸ್‌ ಜೊತೆ ವಿಡಿಯೋ ಚ್ಯಾಟ್‌ ಮಾಡಿ, ಅವರಿಗೆ ಫೋನ್‌ ಮಾಡಿ, ಇ-ಮೇಲ್‌ ಅಥವಾ ಮೆಸೆಜ್‌ ಕಳುಹಿಸಿ. ನಿಮ್ಮ ಮನಸ್ಸಿಗೆ ಏನಾದರೂ ನೋವಾದಾಗ ಫ್ರೆಂಡ್ಸ್‌ ಜೊತೆ ಮಾತಾಡಿ. ನೀವು ಕೂಡ ಆಗಾಗ ಅವರನ್ನು ಕಾಂಟಾಕ್ಟ್‌ ಮಾಡಿ ಅವರು ಹೇಗಿದ್ದಾರೆಂದು ವಿಚಾರಿಸಿ. ಈ ಕೋವಿಡ್‌ ಸಮಯವನ್ನು ನಿಭಾಯಿಸಲು ನೀವು ಏನೇನು ಮಾಡ್ತಿದ್ದೀರಾ ಅಂತ ಅವರಿಗೆ ಹೇಳಿ, ಅವರು ಏನೇನು ಮಾಡ್ತಿದ್ದಾರೆ ಅಂತನೂ ತಿಳಿದುಕೊಳ್ಳಿ. ನಿಮ್ಮ ಫ್ರೆಂಡನ್ನು ಖುಷಿಪಡಿಸಲು ಏನಾದರೂ ಮಾಡಿ. ಆಗ ನಿಮ್ಮಿಬ್ಬರಿಗೂ ಖುಷಿ ಆಗುತ್ತೆ.

  •   ಈ ಸನ್ನಿವೇಶವನ್ನು ಚೆನ್ನಾಗಿ ಉಪಯೋಗಿಸಿ.

     ಬೈಬಲ್‌ ಹೀಗೆ ಹೇಳುತ್ತದೆ: “ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ.”—ಎಫೆಸ 5:16.

     ಯಾಕೆ ಮುಖ್ಯ? ಸಮಯವನ್ನು ಚೆನ್ನಾಗಿ ಉಪಯೋಗಿಸಿದರೆ ಒಳ್ಳೇದನ್ನೇ ಯೋಚನೆ ಮಾಡಲಿಕ್ಕೆ ಆಗುತ್ತೆ. ಅತಿಯಾದ ಚಿಂತೆ ನಿಮ್ಮನ್ನು ಕಾಡುವುದಿಲ್ಲ.—ಲೂಕ 12:25.

     ಹೀಗೆ ಮಾಡಿ: ಈ ಸಮಯದಲ್ಲಿ ಏನೇನು ಮಾಡಲಿಕ್ಕೆ ಆಗ್ತಿಲ್ಲ ಅನ್ನೋದರ ಬಗ್ಗೆ ಯೋಚನೆ ಮಾಡದೆ, ನಿಮ್ಮಿಂದ ಏನು ಮಾಡಲಿಕ್ಕೆ ಆಗುತ್ತೋ ಅದರ ಬಗ್ಗೆ ಯೋಚನೆ ಮಾಡಿ. ಕೆಲವು ವಿಷಯಗಳನ್ನು ಮಾಡಲಿಕ್ಕೆ ನಿಮಗೆ ಆಸೆಯಿದ್ದರೂ ಸಮಯ ಸಿಗದೆ ಅದನ್ನು ಮಾಡದೆ ಹಾಗೇ ಬಿಟ್ಟಿರಬಹುದು. ಈಗ ಅದನ್ನು ಮಾಡಬಹುದು ಅಥವಾ ನಿಮಗೆ ಇಷ್ಟ ಇರುವ ಏನನ್ನಾದರೂ ಕಲಿಯಬಹುದು. ನಿಮ್ಮ ಕುಟುಂಬದವರ ಜೊತೆ ಜಾಸ್ತಿ ಸಮಯ ಕಳೆಯಬಹುದು.

  •   ಒಂದು ರೂಢಿ ಮಾಡಿಕೊಳ್ಳಿ

     ಬೈಬಲ್‌ ಹೀಗೆ ಹೇಳುತ್ತದೆ: “ಎಲ್ಲ ವಿಷ್ಯಗಳು ... ಅಚ್ಚುಕಟ್ಟಾಗಿ ನಡೀಲಿ.”—1 ಕೊರಿಂಥ 14:40.

     ಯಾಕೆ ಮುಖ್ಯ? ಅಚ್ಚುಕಟ್ಟಾಗಿ ಜೀವನ ಮಾಡುವಾಗ ತುಂಬ ಜನರು ಖುಷಿಯಾಗಿ ಇರುತ್ತಾರೆ.

     ಹೀಗೆ ಮಾಡಿ: ಈ ಸನ್ನಿವೇಶಕ್ಕೆ ತಕ್ಕ ಹಾಗೆ ಶೆಡ್ಯೂಲ್‌ ಮಾಡಿಕೊಳ್ಳಿ. ಹೋಮ್‌ವರ್ಕ್‌ ಮಾಡಲು, ಆಫೀಸ್‌ ಕೆಲಸ ಮಾಡಲು, ಮನೆ ಕೆಲಸ ಮಾಡಲು, ದೇವರಿಗೆ ಹತ್ತಿರ ಆಗಲು ಸಮಯ ಮಾಡಿಕೊಳ್ಳಿ. ಅಲ್ಲದೆ, ಕುಟುಂಬದವರ ಜೊತೆ ಸಮಯ ಕಳೆಯುವುದು, ಮನೆ ಹೊರಗೆ ಹೋಗುವುದು, ವ್ಯಾಯಾಮ ಮಾಡುವುದು ಈ ರೀತಿ ಆರೋಗ್ಯಕ್ಕೆ ಒಳ್ಳೇದಾಗಿರುವ ಚಟುವಟಿಕೆಗಳನ್ನು ಮಾಡಿ. ಆಗಾಗ ನಿಮ್ಮ ಶೆಡ್ಯೂಲನ್ನು ನೋಡಿ ಬೇಕಾದ ಬದಲಾವಣೆ ಮಾಡಿ.

  •   ಕಾಲಕ್ಕೆ ಹೊಂದಿಕೊಳ್ಳಿ

     ಬೈಬಲ್‌ ಹೀಗೆ ಹೇಳುತ್ತದೆ: “ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ.”—ಜ್ಞಾನೋಕ್ತಿ 22:3.

     ಯಾಕೆ ಮುಖ್ಯ? ನಮ್ಮ ದೇಹ ಮನಸ್ಸಿನ ಆರೋಗ್ಯಕ್ಕೆ ಶುದ್ಧ ಗಾಳಿ, ಸೂರ್ಯನ ಬೆಳಕು ತುಂಬ ಮುಖ್ಯ. ಸೀಸನ್‌ ಬದಲಾದಾಗ ಅಷ್ಟು ಗಾಳಿ, ಬೆಳಕು ನಿಮಗೆ ಸಿಗಲಿಕ್ಕಿಲ್ಲ.

     ಹೀಗೆ ಮಾಡಿ: ಚಳಿಗಾಲ ಬರುತ್ತಾ ಇದ್ಯಾ? ಹಾಗಾದರೆ ನಿಮ್ಮ ಮನೆ ಅಥವಾ ಆಫೀಸ್‌ ಒಳಗೆ ಜಾಸ್ತಿ ಬೆಳಕು ಬರುವ ಹಾಗೆ ಸೆಟ್ಟಿಂಗ್‌ ಚೇಂಜ್‌ ಮಾಡಿ. ಚಳಿ ಇದ್ದರೂ ಮನೆ ಹೊರಗೆ ಏನಾದರೂ ಕೆಲಸ ಮಾಡಲಿಕ್ಕೆ ಆಗುವುದಾದರೆ ಅದನ್ನು ಮಾಡಿ. ಆ ತರ ಕೆಲಸ ಮಾಡಲು ಬೇಕಾದ ಬಟ್ಟೆಗಳನ್ನು ಕೊಂಡುಕೊಳ್ಳಿ.

     ಬೇಸಿಗೆ ಬರುತ್ತಾ ಇದ್ಯಾ? ಜನರು ಹೆಚ್ಚಾಗಿ ಹೊರಗೆ ಇರುತ್ತಾರೆ. ಹಾಗಾಗಿ ನೀವು ಜಾಗ್ರತೆ! ಎಲ್ಲಿಗೆ ಹೋಗಬೇಕು ಅಂತ ಮೊದಲೇ ಯೋಚಿಸಿ, ಜನ ಹೆಚ್ಚಾಗಿ ಇಲ್ಲದೇ ಇರುವ ಸಮಯದಲ್ಲಿ ಅಲ್ಲಿಗೆ ಹೋಗಿ.

  •   ಸುರಕ್ಷಾ ಕ್ರಮಗಳನ್ನು ಬಿಡದೆ ಪಾಲಿಸಿ

     ಬೈಬಲ್‌ ಹೀಗೆ ಹೇಳುತ್ತದೆ: “ಮೂರ್ಖ ದುಡುಕ್ತಾನೆ, ಅತಿಯಾದ ಆತ್ಮವಿಶ್ವಾಸ ತೋರಿಸ್ತಾನೆ.”—ಜ್ಞಾನೋಕ್ತಿ 14:16.

     ಯಾಕೆ ಮುಖ್ಯ? ಕೋವಿಡ್‌-19 ಜೀವ ಬಲಿ ತೆಗೆದುಕೊಳ್ಳುವ ರೋಗ. ಜಾಗ್ರತೆ ವಹಿಸಲಿಲ್ಲ ಅಂದರೆ ಅದು ನಮಗೂ ಬಂದುಬಿಡುತ್ತೆ.

     ಹೀಗೆ ಮಾಡಿ: ಸರಿಯಾದ ಸ್ಥಳೀಯ ಮಾರ್ಗಸೂಚಿಗಳನ್ನು ಆಗಾಗ ನೋಡುತ್ತಾ ಅದನ್ನೆಲ್ಲ ನೀವು ಜಾಗ್ರತೆಯಿಂದ ಪಾಲಿಸುತ್ತಾ ಇದ್ದೀರಾ ಇಲ್ಲವಾ ಅಂತ ಯೋಚಿಸಿ. ನೀವು ಏನೇ ಮಾಡಿದರೂ ಅದರಿಂದ ನಿಮ್ಮ ಕುಟುಂಬಕ್ಕೆ ಬೇರೆಯವರಿಗೆ ಏನಾಗುತ್ತದೆ ಅಂತ ಗಮನದಲ್ಲಿಡಿ.

  •   ದೇವರಿಗೆ ಇನ್ನೂ ಹತ್ತಿರ ಆಗಿ

     ಬೈಬಲ್‌ ಹೀಗೆ ಹೇಳುತ್ತದೆ: “ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ.”—ಯಾಕೋಬ 4:8.

     ಯಾಕೆ ಮುಖ್ಯ? ಏನೇ ಕಷ್ಟ ಬಂದರೂ ಅದನ್ನು ನಿಭಾಯಿಸಲು ದೇವರು ಖಂಡಿತ ಸಹಾಯ ಮಾಡುತ್ತಾನೆ.—ಯೆಶಾಯ 41:13.

     ಹೀಗೆ ಮಾಡಿ: ಪ್ರತಿದಿನ ಬೈಬಲನ್ನು ಓದಿ. ಹೀಗೆ ಮಾಡಿದರೆ ದೇವರಿಗೆ ಹತ್ತಿರ ಆಗುತ್ತೀರ.

 ಕೋವಿಡ್‌ ಸಮಯದಲ್ಲೂ ಲೋಕದ ಸುತ್ತ ಪ್ರತಿವಾರ ಯೆಹೋವನ ಸಾಕ್ಷಿಗಳ ಕೂಟಗಳು ನಡೆಯುತ್ತಾ ಇದೆ. ವರ್ಷಕ್ಕೆ ಒಂದು ಸಲ ಕ್ರಿಸ್ತನ ಸ್ಮರಣೆ ಮತ್ತು ಅಧಿವೇಶನ ನಡೆಯುತ್ತಿದೆ. ಇದೆಲ್ಲದರಿಂದ ನೀವೂ ಪ್ರಯೋಜನ ಪಡೆಯಬಹುದು. ಹೇಗೆ ಅಂತ ತಿಳಿದುಕೊಳ್ಳಲು ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ.

 ನಿಮಗೆ ಸಹಾಯ ಮಾಡುವ ಬೈಬಲ್‌ ವಚನಗಳು

 ಯೆಶಾಯ 30:15: “ಶಾಂತಿಯಿಂದ ಇದ್ದು ಭರವಸೆ ಇಟ್ರೆ ನಿಮಗೆ ಬಲ ಸಿಗುತ್ತೆ.”

 ಅರ್ಥ: ದೇವರು ಹೇಳುವ ಬುದ್ಧಿಮಾತಿನಲ್ಲಿ ಭರವಸೆ ಇಟ್ಟರೆ ಕಷ್ಟದಲ್ಲೂ ನಾವು ಶಾಂತಾರಾಗಿ ಇರಲು ಆಗುತ್ತದೆ.

 ಜ್ಞಾನೋಕ್ತಿ 15:15: “ದುಃಖದಲ್ಲಿ ಇರುವವನಿಗೆ ಜೀವನ ಯಾವಾಗ್ಲೂ ಜಿಗುಪ್ಸೆ, ಸಂತೋಷದ ಹೃದಯ ಇರುವವನಿಗೆ ದಿನಾಲೂ ಔತಣ.”

 ಅರ್ಥ: ಕಷ್ಟ ಇರುವಾಗಲೂ ಏನಾದರೂ ಒಳ್ಳೇದು ಆಗುತ್ತದೆ. ಅದಕ್ಕೆ ಗಮನಕೊಟ್ಟರೆ ನಾವು ಖುಷಿಯಾಗಿ ಇರುತ್ತೇವೆ.

 ಜ್ಞಾನೋಕ್ತಿ 14:15: “ಅನುಭವ ಇಲ್ಲದವನು ಹೇಳಿದ್ದನ್ನೆಲ್ಲ ಕಣ್ಮುಚ್ಚಿ ನಂಬ್ತಾನೆ, ಆದ್ರೆ ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ.”

 ಅರ್ಥ: ಆರೋಗ್ಯ ಕ್ರಮ ಪಾಲಿಸಿ. ಇಂಥ ನಿರ್ಬಂಧಗಳ ಅವಶ್ಯಕತೆ ಇಲ್ಲ ಅಂತ ನೆನೆಸಬೇಡಿ.

 ಯೆಶಾಯ 33:24: “ಒಬ್ಬನೂ ‘ನನಗೆ ಹುಷಾರಿಲ್ಲ’ ಅಂತ ಹೇಳಲ್ಲ.”

 ಅರ್ಥ: ಎಲ್ಲ ತರದ ಕಾಯಿಲೆಗಳನ್ನು ದೇವರು ತೆಗೆದುಹಾಕುತ್ತಾನೆ.