ನಮಗೆ ನ್ಯಾಯ ಸಿಗುತ್ತಾ?
ಈಗ ಎಲ್ಲಿ ನೋಡಿದರೂ ಬರೀ ಅನ್ಯಾಯ. ಅನ್ಯಾಯವಾಗಿ ಜೈಲಿಗೆ ಹೋದ ಇಬ್ಬರ ಉದಾಹರಣೆ ನೋಡಿ:
ಯಾವುದೋ ಆರೋಪದ ಮೇರೆಗೆ ಜೈಲಲ್ಲಿದ್ದ ಒಬ್ಬನನ್ನು ಬಿಡುಗಡೆ ಮಾಡಬೇಕೆಂದು ಅಮೆರಿಕದ ನ್ಯಾಯಾಧೀಶೆ 2018 ರ ಜನವರಿಯಲ್ಲಿ ತೀರ್ಪು ಕೊಟ್ಟಳು. ಡಿಎನ್‌ಎ ಸಾಕ್ಷ್ಯಾಧಾರಗಳ ಮೇಲೆ ಅವನು ನಿರಪರಾಧಿ ಎಂದು ಸಾಬೀತಾಯಿತು. ಆದರೆ ಈ ತೀರ್ಪು ಬರುವುದಕ್ಕೆ ಮುಂಚೆ ಅವನು ಸುಮಾರು 38 ವರ್ಷ ಜೈಲಲ್ಲಿ ಇರಬೇಕಾಯಿತು.
ಆಫ್ರಿಕದ ಒಂದು ದೇಶದಲ್ಲಿ ಮೂವರು ಯುವಕರು ತಮ್ಮ ಮನಸ್ಸಾಕ್ಷಿ ಒಪ್ಪದ ಕಾರಣ ಮಿಲಿಟರಿಗೆ ಸೇರಲಿಲ್ಲ. ಹಾಗಾಗಿ 1994 ಸೆಪ್ಟೆಂಬರಲ್ಲಿ ಅವರನ್ನು ಜೈಲಿಗೆ ಹಾಕಲಾಯಿತು. 2020 ಸೆಪ್ಟೆಂಬರಿಗೆ ಅವರು ಜೈಲಿಗೆ ಹೋಗಿ 26 ವರ್ಷ ಆಯಿತು. ಆದರೆ ಕಾನೂನಿನ ಪ್ರಕಾರ ಅವರ ಮೇಲೆ ಅಪರಾಧದ ಆರೋಪ ಇರಲಿಲ್ಲ. ಅವರನ್ನು ನ್ಯಾಯಾಲಯದ ಮುಂದೆಯೂ ತಂದು ನಿಲ್ಲಿಸಲಿಲ್ಲ.
ನಿಮಗೆ ಅನ್ಯಾಯ ಆಗಿದೆಯಾ? ಹಿಂದಿನ ಕಾಲದಲ್ಲಿದ್ದ ಯೋಬ “ಸಹಾಯಕ್ಕಾಗಿ ಅರಚುತ್ತಾ ಇದ್ದೀನಿ, ನನಗೆ ನ್ಯಾಯ ಸಿಗ್ತಿಲ್ಲ” ಅಂದ. (ಯೋಬ 19:7) ನಿಮಗೂ ಹೀಗೆ ಅನಿಸುತ್ತಿರಬೇಕು. ಆದರೆ ಎಲ್ಲರಿಗೂ ನ್ಯಾಯ ಸಿಗುವ ಸಮಯ ಬಂದೇ ಬರುತ್ತದೆ ಅಂತ ದೇವರು ಬೈಬಲಲ್ಲಿ ಮಾತುಕೊಟ್ಟಿದ್ದಾನೆ. ಅಲ್ಲಿ ತನಕ ನಮಗೀಗ ಆಗಿರುವ ಅನ್ಯಾಯವನ್ನು ಸಹಿಸಿಕೊಳ್ಳಲು ಬೈಬಲ್ ಸಹಾಯ ಮಾಡುತ್ತದೆ.
ಅನ್ಯಾಯಕ್ಕೆ ಕಾರಣ ಏನು?
ದೇವರ ಮಾರ್ಗದರ್ಶನವನ್ನು ತಿರಸ್ಕರಿಸುವವರೇ ಅನ್ಯಾಯ ಮಾಡುತ್ತಾರೆ. ಬೈಬಲ್ ಹೇಳುವ ಪ್ರಕಾರ ದೇವರು ಯಾವಾಗಲೂ ನ್ಯಾಯವಾಗಿ ಇರುವುದನ್ನೇ ಮಾಡುತ್ತಾನೆ. (ಯೆಶಾಯ 51:4) ಬೈಬಲಲ್ಲಿರುವ “ನ್ಯಾಯ“ ಮತ್ತು “ನೀತಿ” ಅನ್ನುವ ಎರಡು ಪದಗಳಿಗೆ ಹೆಚ್ಚುಕಡಿಮೆ ಒಂದೇ ಅರ್ಥ ಇದೆ. (ಕೀರ್ತನೆ 33:5) ದೇವರ ಮಟ್ಟಕ್ಕೆ ಅನುಸಾರ ಸರಿಯಾಗಿ ಇರುವುದನ್ನು ಮಾಡುವವರು ಬೇರೆಯವರ ಜೊತೆ ನ್ಯಾಯವಾಗಿ ನಡೆದುಕೊಳ್ಳುತ್ತಾರೆ. ಆದರೆ ದೇವರ ಮಟ್ಟಗಳನ್ನು ಪಾಲಿಸದೆ ಪಾಪ ಮಾಡುವವರು ಬೇರೆಯವರಿಗೆ ಅನ್ಯಾಯ ಮಾಡುತ್ತಾರೆ. ಕೆಲವು ಉದಾಹರಣೆಗಳನ್ನು ನೋಡಿ:
ಸ್ವಾರ್ಥ. ಸ್ವಾರ್ಥದ ಆಸೆ ಇದ್ದಾಗಲೇ ಜನ ಪಾಪ ಮಾಡುತ್ತಾರೆ. (ಯಾಕೋಬ 1:14, 15) ಆಸೆಪಟ್ಟಿದ್ದು ಸಿಗಬೇಕು ಅಂತ ಬೇರೆಯವರಿಗೆ ಅನ್ಯಾಯ ಮಾಡಲಿಕ್ಕೂ ಹೇಸಲ್ಲ. ಆದರೆ ನಮಗೆ ಪ್ರಯೋಜನ ಆಗೋದಕ್ಕಿಂತ ಬೇರೆಯವರಿಗೆ ಪ್ರಯೋಜನ ಆಗೋದನ್ನೇ ನಾವು ಮಾಡಬೇಕು ಅಂತ ದೇವರು ಇಷ್ಟಪಡುತ್ತಾನೆ.—1 ಕೊರಿಂಥ 10:24.
ಗೊತ್ತಿಲ್ಲದೆ ಮಾಡುತ್ತಾರೆ. ಕೆಲವರು ಬೇರೆಯವರಿಗೆ ಅನ್ಯಾಯ ಮಾಡುತ್ತಾರೆ. ಅದು ತಪ್ಪು ಅಂತ ಅವರಿಗೇ ಗೊತ್ತಿರಲ್ಲ. ಆದರೆ ದೇವರ ದೃಷ್ಟಿಯಲ್ಲಿ ಅದು ಕೂಡ ಪಾಪನೇ. (ರೋಮನ್ನರಿಗೆ 10:3) ಹೀಗೆ ಗೊತ್ತಿಲ್ಲದೆ ಮಾಡಿದ ಅನ್ಯಾಯಗಳಲ್ಲಿ ದೊಡ್ಡ ಅನ್ಯಾಯ ಯೇಸು ಕ್ರಿಸ್ತನನ್ನು ಸಾಯಿಸಿದ್ದು.—ಅಪೊಸ್ತಲರ ಕಾರ್ಯ 3:15, 17.
ಗುರಿ ಸಾಧಿಸದ ವ್ಯವಸ್ಥೆಗಳು. ‘ನ್ಯಾಯವಾಗಿ ನಡೆದುಕೊಳ್ತೇವೆ, ನ್ಯಾಯ ಸಿಗುವ ಹಾಗೆ ಮಾಡ್ತೇವೆ’ ಅಂತ ಈ ಲೋಕದ ರಾಜಕೀಯ, ವ್ಯಾಪಾರ ಮತ್ತು ಧಾರ್ಮಿಕ ವ್ಯವಸ್ಥೆಗಳು ಹೇಳಿಕೊಳ್ಳುತ್ತವೆ. ಆದರೆ ಅದೆಲ್ಲ ಹೆಸರಿಗಷ್ಟೇ. ಈಗ ಆಗುತ್ತಿರುವ ತಪ್ಪುಗಳು, ಭ್ರಷ್ಟಾಚಾರ, ಬೇಧಭಾವ, ದ್ವೇಷ, ಅತಿಯಾಸೆ, ಅಸಹನೆ ಇದಕ್ಕೆಲ್ಲ ಕಾರಣ ಆ ವ್ಯವಸ್ಥೆಗಳೇ. ಹಾಗಾಗಿ ಕೆಲವರು ತುಂಬ ಶ್ರೀಮಂತರಾಗಿ ಮೆರೆಯುತ್ತಿದ್ದರೆ ಇನ್ನು ಕೆಲವರು ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ. ಇದರಿಂದ ಜನರಿಗೆ ಅನ್ಯಾಯ ಆಗುತ್ತಿದೆ. ಜನರಿಗೆ ಒಳ್ಳೇದು ಮಾಡಬೇಕು ಅನ್ನುವ ಆಸೆ ಕೆಲವರಿಗೆ ಇದೆ. ಆದರೆ ದೇವರ ಮಾರ್ಗದರ್ಶನ ತಳ್ಳಿಹಾಕಿ ಏನೇ ಒಳ್ಳೇದು ಮಾಡಲು ಯಾರೇ ಪ್ರಯತ್ನಪಟ್ಟರೂ ಅದು ಸಾರ್ಥಕ ಆಗಲ್ಲ.—ಪ್ರಸಂಗಿ 8:9; ಯೆರೆಮೀಯ 10:23.
ಅನ್ಯಾಯವನ್ನು ದೇವರು ನೋಡುತ್ತಿದ್ದಾನಾ?
ಹೌದು. ದೇವರು ಅನ್ಯಾಯವನ್ನು ದ್ವೇಷಿಸುತ್ತಾನೆ. ಬೇರೆಯವರಿಗೆ ಅನ್ಯಾಯ ಮಾಡಬೇಕೆಂದು ಯೋಚಿಸಿದರೂ ದೇವರು ಅದನ್ನು ಇಷ್ಟಪಡಲ್ಲ. (ಜ್ಞಾನೋಕ್ತಿ 6:16-18) “ಯೆಹೋವನಾದ a ನಾನು ನ್ಯಾಯವನ್ನ ಪ್ರೀತಿಸ್ತೀನಿ, ಸುಲಿಗೆ ಮಾಡೋದನ್ನ, ಅನೀತಿಯನ್ನ ದ್ವೇಷಿಸ್ತೀನಿ” ಎಂದು ಆತನೇ ಹೇಳಿದ್ದಾನೆ.—ಯೆಶಾಯ 61:8.
ಜನರು ನ್ಯಾಯವಾಗಿ ನಡೆದುಕೊಳ್ಳಬೇಕು ಅಂತ ದೇವರು ಇಷ್ಟಪಡುತ್ತಾನೆ. ಇದು, ಹಿಂದಿನ ಕಾಲದ ಇಸ್ರಾಯೇಲ್ಯರಿಗೆ ಆತನು ಕೊಟ್ಟ ನಿಯಮಗಳಿಂದ ಗೊತ್ತಾಗುತ್ತದೆ. ನ್ಯಾಯಾಧೀಶರು ಲಂಚ ತೆಗೆದುಕೊಳ್ಳಬಾರದು, ನ್ಯಾಯಕ್ಕೆ ವಿರುದ್ಧವಾಗಿ ಯಾವುದನ್ನೂ ಮಾಡಬಾರದು ಎಂದು ದೇವರು ಆಜ್ಞೆ ಕೊಟ್ಟನು. (ಧರ್ಮೋಪದೇಶಕಾಂಡ 16:18-20) ಬಡಬಗ್ಗರನ್ನು ಏಮಾರಿಸಿ ಸ್ವಾರ್ಥಕ್ಕೆ ಬಳಸಿಕೊಂಡು ದೇವರ ಮಾತನ್ನು ಮೀರಿ ನಡೆದ ಇಸ್ರಾಯೇಲ್ಯರನ್ನು ಆತನು ಖಂಡಿಸಿದನು. ಎಷ್ಟು ಹೇಳಿದರೂ ಅವರು ಮಾತು ಕೇಳದೇ ಅನ್ಯಾಯ ಮಾಡುತ್ತಾ ಇದ್ದಾಗ ಅವರ ಕೈ ಬಿಟ್ಟುಬಿಟ್ಟನು.—ಯೆಶಾಯ 10:1-3.
ದೇವರು ಅನ್ಯಾಯ ಆಗುವುದನ್ನು ನಿಲ್ಲಿಸುತ್ತಾನಾ?
ಖಂಡಿತ ನಿಲ್ಲಿಸುತ್ತಾನೆ. ಅನ್ಯಾಯಕ್ಕೆ ಮೂಲ ಕಾರಣ ಪಾಪ. ಅದನ್ನೇ ದೇವರು ಯೇಸು ಕ್ರಿಸ್ತನ ಮೂಲಕ ತೆಗೆದುಹಾಕುತ್ತಾನೆ. ಅಲ್ಲದೆ, ಮನುಷ್ಯರೆಲ್ಲ ಯಾವುದೇ ಕುಂದುಕೊರತೆ ಇಲ್ಲದೆ ಪರಿಪೂರ್ಣವಾಗಿ ಇರುವಂತೆ ಮಾಡುತ್ತಾನೆ. ಅವರು ಹಾಗಿರಬೇಕು ಅನ್ನೋದೇ ಮೊದಲಿಂದಲೂ ಆತನ ಇಷ್ಟ. (ಯೋಹಾನ 1:29; ರೋಮನ್ನರಿಗೆ 6:23) ಆತನು ಈಗಾಗಲೇ ಸ್ವರ್ಗದಲ್ಲಿ ಒಂದು ಸರ್ಕಾರ ಸ್ಥಾಪಿಸಿದ್ದಾನೆ. ಆ ಸರ್ಕಾರ ನೀತಿ ತುಂಬಿರುವ ಹೊಸ ಲೋಕವನ್ನು ತರುತ್ತದೆ ಮತ್ತು ಪ್ರತಿಯೊಬ್ಬರಿಗೆ ನ್ಯಾಯ ಸಿಗುವಂತೆ ಮಾಡುತ್ತದೆ. (ಯೆಶಾಯ 32:1; 2 ಪೇತ್ರ 3:13) ಈ ಸರ್ಕಾರದ ಬಗ್ಗೆ ಹೆಚ್ಚು ತಿಳಿಯಲು ದೇವರ ರಾಜ್ಯ ಅಂದರೇನು? ವಿಡಿಯೋ ನೋಡಿ.
ನೀತಿಯ ಹೊಸ ಲೋಕದಲ್ಲಿ ಜೀವನ ಹೇಗಿರುತ್ತದೆ?
ಭೂಮಿಯಲ್ಲಿ ಎಲ್ಲ ಕಡೆ ನ್ಯಾಯ ಇರುವಾಗ ಎಲ್ಲರಿಗೂ ಶಾಂತಿ ಭದ್ರತೆ ಇರುತ್ತದೆ. (ಯೆಶಾಯ 32:16-18) ದೇವರು ಯಾರನ್ನೂ ಮೇಲು-ಕೀಳು ಅಂತ ನೋಡದೆ ಎಲ್ಲರನ್ನೂ ಸಮಾನವಾಗಿ ನೋಡುತ್ತಾನೆ. ಹಾಗಾಗಿ ಒಬ್ಬರಿಗೂ ಅನ್ಯಾಯ ಆಗಲ್ಲ. ಅನ್ಯಾಯ ಆದಾಗ ಈಗ ನಾವು ಅನುಭವಿಸುವ ದುಃಖ ನೋವು ಕಣ್ಣೀರು ವೇದನೆ ಅದು ಯಾವುದೂ ಅಲ್ಲಿ ಯಾವತ್ತೂ ಇರಲ್ಲ. ಆ ಕಹಿ ನೆನಪುಗಳು ಕೂಡ ಮಾಸಿಹೋಗುತ್ತದೆ. (ಯೆಶಾಯ 65:17; ಪ್ರಕಟನೆ 21:3, 4) ಇದರ ಬಗ್ಗೆ ಹೆಚ್ಚು ತಿಳಿಯಲು “ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?” ಲೇಖನ ನೋಡಿ.
ಅನ್ಯಾಯ ಇಲ್ಲದ ಲೋಕ ತರುತ್ತೇನೆಂದು ದೇವರು ಮಾತು ಕೊಟ್ಟಿದ್ದಾನೆ. ಅದನ್ನು ನಂಬಬಹುದಾ?
ಖಂಡಿತ ನಂಬಬಹುದು. ದೇವರು ಹೇಳಿರುವ ಎಷ್ಟೋ ಭವಿಷ್ಯವಾಣಿ ಬೈಬಲಲ್ಲಿದೆ, ಅದೆಲ್ಲ ನಿಜ ಆಗಿದೆ. ಇತಿಹಾಸ ವಿಜ್ಞಾನದ ಬಗ್ಗೆ ಬೈಬಲ್ ಹೇಳುವ ವಿಷಯದಲ್ಲಿ ಒಂಚೂರೂ ತಪ್ಪಿಲ್ಲ. ಇದೆಲ್ಲ ದೇವರು ಕೊಟ್ಟಿರುವ ಮಾತನ್ನು ನೀವು ಪೂರ್ತಿ ನಂಬಬಹುದು ಅನ್ನುವುದಕ್ಕೆ ಆಧಾರ. ಹೆಚ್ಚಿನ ವಿವರಗಳಿಗೆ ಕೆಳಗಿನ ಲೇಖನಗಳನ್ನು ನೋಡಿ.
ಈಗ ನ್ಯಾಯಕ್ಕಾಗಿ ಹೋರಾಡಬೇಕಾ?
ಒಳ್ಳೆಯವರು ತಮಗೆ ಅನ್ಯಾಯ ಆಗುತ್ತೆ ಅಂತ ಗೊತ್ತಾದಾಗ ಅದನ್ನು ತಡೆಯಲು ತಮ್ಮಿಂದ ಆಗುವುದನ್ನೆಲ್ಲ ಮಾಡಿದರು ಅಂತ ಬೈಬಲಲ್ಲಿದೆ. ಉದಾಹರಣೆಗೆ ಒಂದು ಸಲ ಕೆಲವರು ಅಪೊಸ್ತಲ ಪೌಲನನ್ನು ಅನ್ಯಾಯವಾಗಿ ಹಿಡಿದುಕೊಂಡು ಹೋಗಿ ಬೆದರಿಕೆ ಹಾಕಿದರು. ಆಗ ಅವನು ಸುಮ್ಮನಿದ್ದಿದ್ದರೆ ಸತ್ತೇ ಹೋಗುತ್ತಿದ್ದ. ಆದರೆ ಅವನು ಕಾನೂನುಬದ್ಧವಾಗಿ ಏನು ಮಾಡಲಿಕ್ಕೆ ಆಗುತ್ತೋ ಅದನ್ನು ಮಾಡಿದ. ರೋಮಿನ ರಾಜನಿಗೆ ಅಪೀಲು ಮಾಡಿದ.—ಅಪೊಸ್ತಲರ ಕಾರ್ಯ 25:8-12.
ಒಂದಂತೂ ನಿಜ, ಲೋಕದಲ್ಲಿ ಆಗುತ್ತಿರುವ ಎಲ್ಲ ಅನ್ಯಾಯವನ್ನು ಸರಿ ಮಾಡಲಿಕ್ಕೆ ಯಾರು ಎಷ್ಟೇ ಪ್ರಯತ್ನಪಟ್ಟರೂ ಅದು ಯಶಸ್ಸು ಕಾಣಲ್ಲ. (ಪ್ರಸಂಗಿ 1:15) ಅನ್ಯಾಯದಿಂದ ತುಂಬ ಜನ ಒಳಗೊಳಗೇ ನೋವು ವೇದನೆ ಅನುಭವಿಸಿದ್ದಾರೆ. ನೀತಿ ತುಂಬಿರುವ ಹೊಸ ಲೋಕದ ಬಗ್ಗೆ ದೇವರು ಕೊಟ್ಟಿರುವ ಮಾತನ್ನೇ ಅವರು ನಂಬಿಕೊಂಡು ಜೀವಿಸ್ತಿರೋದರಿಂದ ಅವರಿಗೆ ನೆಮ್ಮದಿ ಇದೆ, ಮನಶ್ಶಾಂತಿ ಇದೆ.
a ದೇವರ ಹೆಸರು ಯೆಹೋವ.—ಕೀರ್ತನೆ 83:18.