ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಯಾನಕ ಭೂಕಂಪಗಳ ಬಗ್ಗೆ ಬೈಬಲ್‌ ಭವಿಷ್ಯವಾಣಿ ಏನು ಹೇಳಿತ್ತು?

ಭಯಾನಕ ಭೂಕಂಪಗಳ ಬಗ್ಗೆ ಬೈಬಲ್‌ ಭವಿಷ್ಯವಾಣಿ ಏನು ಹೇಳಿತ್ತು?

 ಪ್ರತಿವರ್ಷ ಸಾವಿರಾರು ಭೂಕಂಪಗಳು ಆಗುತ್ತೆ. ಅವುಗಳಲ್ಲಿ ಹೆಚ್ಚಿನ ಭೂಕಂಪಗಳಿಂದ ಜಾಸ್ತಿ ಹಾನಿ ಆಗಲ್ಲ. ಆದರೆ ಕೆಲವು ಭೂಕಂಪಗಳಿಂದ ತುಂಬ ಹಾನಿ ಆಗುತ್ತೆ, ಆಸ್ತಿ-ಪಾಸ್ತಿ ನಷ್ಟ ಆಗುತ್ತೆ, ತುಂಬ ಜನರು ಪ್ರಾಣನೂ ಕಳಕೊಳ್ಳುತ್ತಾರೆ. ಕೆಲವೊಮ್ಮೆ ಭೂಕಂಪ ಆದಾಗ ಸುನಾಮಿ ಆಗುತ್ತೆ. ಆಗ ಕರಾವಳಿಯಲ್ಲಿ ಇರೋ ಎಷ್ಟೋ ಜನ ಸಾಯುತ್ತಾರೆ. ಈ ರೀತಿ ಭಯಾನಕ ಭೂಕಂಪಗಳು ಆಗುತ್ತೆ ಅಂತ ಬೈಬಲ್‌ ಮುಂಚೆನೇ ಹೇಳಿತ್ತಾ?

 ಭೂಕಂಪಗಳ ಬಗ್ಗೆ ಬೈಬಲ್‌ ಮುಂಚೆನೇ ಹೇಳಿತ್ತಾ?

 ಯೇಸು ಭವಿಷ್ಯವಾಣಿಯಲ್ಲಿ ಭೂಕಂಪಗಳ ಬಗ್ಗೆನೂ ಹೇಳಿದ. ಮತ್ತಾಯ, ಮಾರ್ಕ ಮತ್ತು ಲೂಕ ಅನ್ನೋ ಮೂರೂ ಪುಸ್ತಕಗಳಲ್ಲಿ ಅದರ ಬಗ್ಗೆ ಇದೆ.

 “ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧಮಾಡುತ್ತೆ. ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆ ಇರುತ್ತೆ, ಭೂಕಂಪ ಆಗುತ್ತೆ.”—ಮತ್ತಾಯ 24:7.

 “ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧ ಮಾಡುತ್ತೆ. ಒಂದರ ನಂತ್ರ ಇನ್ನೊಂದು ಸ್ಥಳದಲ್ಲಿ ಭೂಕಂಪ ಆಗುತ್ತೆ. ಆಹಾರದ ಕೊರತೆ ಇರುತ್ತೆ.”—ಮಾರ್ಕ 13:8.

 “ಒಂದರ ನಂತ್ರ ಇನ್ನೊಂದು ಸ್ಥಳದಲ್ಲಿ ಭೂಕಂಪ ಆಗುತ್ತೆ. ಒಂದಾದ ಮೇಲೆ ಒಂದು ಜಾಗದಲ್ಲಿ ಅಂಟುರೋಗಗಳು, ಆಹಾರದ ಕೊರತೆ ಇರುತ್ತೆ.”—ಲೂಕ 21:11.

 “ಒಂದರ ನಂತರ ಇನ್ನೊಂದು ಸ್ಥಳದಲ್ಲಿ” ಯುದ್ಧಗಳು, ಆಹಾರದ ಕೊರತೆ ಮತ್ತು ಅಂಟುರೋಗಗಳು ಇರುವಾಗಲೇ ‘ಭಯಾನಕ ಭೂಕಂಪಗಳೂ’ ಆಗುತ್ತೆ ಅಂತ ಯೇಸು ಹೇಳಿದ್ದನು. ಈ ಘಟನೆಗಳೆಲ್ಲ ನಡೆಯುವ ಸಮಯಾವಧಿಯನ್ನು ‘ಕೊನೇ ದಿನಗಳು’ ಮತ್ತು “ಲೋಕವ್ಯವಸ್ಥೆಯ ಕೊನೆಕಾಲ” ಅಂತ ಬೈಬಲ್‌ ಹೇಳುತ್ತೆ. (ಮತ್ತಾಯ 24:3, NWT-KBB; 2 ತಿಮೊತಿ 3:1) ಈ ‘ಕೊನೇ ದಿನಗಳು’ 1914ರಲ್ಲಿ ಶುರುವಾಯಿತು, ಅದಿನ್ನೂ ಮುಗಿದಿಲ್ಲ.

 ಭೂಕಂಪಗಳ ಬಗ್ಗೆ ಬೈಬಲ್‌ ಹೇಳಿದ್ದ ಭವಿಷ್ಯವಾಣಿ ನಿಜ ಆಗುತ್ತಿದೆಯಾ?

 ಹೌದು, ಯೇಸು ಹೇಳಿದ ಹಾಗೇ ಇವತ್ತು ಭೂಕಂಪಗಳು ಆಗುತ್ತಿವೆ. 1914ರಿಂದ ಇಲ್ಲಿ ತನಕ 1,950ಕ್ಕಿಂತ ಜಾಸ್ತಿ ಭೂಕಂಪಗಳು ಆಗಿವೆ. ಅದರಲ್ಲಿ 20 ಲಕ್ಷಕ್ಕಿಂತ ಹೆಚ್ಚು ಜನರು ಸತ್ತುಹೋಗಿದ್ದಾರೆ. a ಇತ್ತೀಚಿನ ವರ್ಷಗಳ ಕೆಲವು ಉದಾಹರಣೆಗಳನ್ನು ನೋಡೋಣ.

 2004—ಹಿಂದೂ ಮಹಾಸಾಗರ. ಈ ಭೂಕಂಪದ ಪ್ರಮಾಣ 9.1; ಈ ಭೂಕಂಪದಿಂದ ಸುನಾಮಿ ಬಂತು. ಇದರಿಂದ ತುಂಬ ದೇಶಗಳಿಗೆ ಹಾನಿ ಆಯಿತು. ಸುಮಾರು 2,25,000 ಜನರು ಪ್ರಾಣ ಕಳಕೊಂಡರು.

 2008—ಚೀನಾ. ಇಲ್ಲಿ ಆದ ಭೂಕಂಪದ ಪ್ರಮಾಣ 7.9; ಅಲ್ಲಿನ ಹಳ್ಳಿಗಳು ಮತ್ತು ಪಟ್ಟಣಗಳು ನಾಶ ಆಯ್ತು. 90 ಸಾವಿರ ಜನರು ಸತ್ತು ಹೋದರು. 3,75,000 ಜನರಿಗೆ ಗಾಯಗಳಾದವು. ಅಷ್ಟೇ ಅಲ್ಲ, ಲಕ್ಷಾಂತರ ಜನರು ಬೀದಿಪಾಲಾದರು.

 2010—ಹೈಟಿ. ಈ ಭೂಕಂಪದ ಪ್ರಮಾಣ 7.0; ಈ ದೊಡ್ಡ ಭೂಕಂಪದ ಜೊತೆಗೆ ಚಿಕ್ಕ-ಚಿಕ್ಕ ಭೂಕಂಪಗಳೂ ಆದವು. ಅದರಲ್ಲಿ ಪ್ರಾಣ ಕಳಕೊಂಡವರ ಸಂಖ್ಯೆ 3 ಲಕ್ಷಕ್ಕಿಂತ ಹೆಚ್ಚು. ಅಲ್ಲದೆ ಲಕ್ಷಾಂತರ ಜನರು ಮನೆಯನ್ನೂ ಕಳಕೊಂಡರು.

 2011—ಜಪಾನ್‌. ಇಲ್ಲಿ 9.0 ಪ್ರಮಾಣದ ಭೂಕಂಪ ಆಯ್ತು. ಆಮೇಲೆ ಸುನಾಮಿ ಬಂತು. ಇದರಲ್ಲಿ 18,500 ಜನರ ಜೀವ ಹೋಯ್ತು. ಲಕ್ಷಗಟ್ಟಲೆ ಜನರು ತಮ್ಮ ಮನೆಗಳನ್ನ ಬಿಟ್ಟು ಹೋಗಬೇಕಾಯ್ತು. ಫುಕುಶಿಮಾ ವಿದ್ಯುತ್‌ ಸ್ಥಾವರ ಹಾಳಾಗಿ ವಿಕಿರಣ ಸೋರಿಕೆ ಆಯ್ತು. ಅದು ತುಂಬ ಹಾನಿಕಾರಿ ಆಗಿರುವುದರಿಂದ ಜನರು ತಮ್ಮ ಪ್ರಾಣ ಉಳಿಸಿಕೊಳ್ಳೋಕೆ ಅಲ್ಲಿಂದ ಬೇರೆ ಕಡೆ ಹೋಗಬೇಕಾಯ್ತು. ಇದೆಲ್ಲ ಆಗಿ 10 ವರ್ಷ ಆದರೂ ಸುಮಾರು 40 ಸಾವಿರ ಜನರಿಗೆ ಇನ್ನೂ ತಮ್ಮ ಮನೆಗಳಿಗೆ ವಾಪಸ್‌ ಹೋಗೋಕೆ ಆಗುತ್ತಿಲ್ಲ.

 ಈ ಭವಿಷ್ಯವಾಣಿಗಳು ನಮ್ಮ ಕಣ್ಮುಂದೆನೇ ನಡೆಯುತ್ತಾ ಇರುವುದರಿಂದ ಏನು ಗೊತ್ತಾಗುತ್ತೆ?

 ಭೂಕಂಪಗಳ ಬಗ್ಗೆ ಬೈಬಲಲ್ಲಿರೋ ಭವಿಷ್ಯವಾಣಿಗಳಿಂದ ಮುಂದೆ ಏನಾಗುತ್ತೆ ಅಂತ ತಿಳಿದುಕೊಳ್ಳೋಕೆ ಆಗುತ್ತೆ. “ಈ ಎಲ್ಲ ವಿಷ್ಯ ನಡಿಯೋದನ್ನ ನೋಡಿದಾಗ ದೇವರ ಆಳ್ವಿಕೆ ತುಂಬ ಹತ್ರ ಇದೆ ಅಂತ ತಿಳ್ಕೊಳ್ಳಿ” ಅಂತ ಯೇಸು ಹೇಳಿದನು.—ಲೂಕ 21:31.

 ದೇವರ ಸರ್ಕಾರ ಸ್ವರ್ಗದಲ್ಲಿ ಆಳುತ್ತಿದೆ ಮತ್ತು ಅದರ ರಾಜ ಯೇಸು ಕ್ರಿಸ್ತ ಅಂತ ಬೈಬಲ್‌ ತಿಳಿಸುತ್ತೆ. ಇದೇ ಸರ್ಕಾರ ಭೂಮಿಗೆ ಬರಲಿ ಅಂತ ಪ್ರಾರ್ಥನೆ ಮಾಡೋಕೆ ಯೇಸು ತನ್ನ ಶಿಷ್ಯರಿಗೆ ಕಲಿಸಿದನು.—ಮತ್ತಾಯ 6:10.

 ದೇವರ ಸರ್ಕಾರ ಭೂಮಿಯನ್ನು ಆಳುವಾಗ ಭೂಕಂಪದಂಥ ನೈಸರ್ಗಿಕ ವಿಪತ್ತುಗಳಿಂದ ಜನರಿಗೆ ಹಾನಿ ಆಗದ ಹಾಗೆ ದೇವರು ನೋಡಿಕೊಳ್ತಾನೆ. (ಯೆಶಾಯ 32:18) ಈಗ ಆಗುತ್ತಿರುವ ಭೂಕಂಪಗಳಿಂದ ಆಗಿರೋ ನೋವು-ನಷ್ಟಗಳನ್ನ ಸರಿಮಾಡ್ತಾನೆ. (ಯೆಶಾಯ 65:17; ಪ್ರಕಟನೆ 21:3, 4) ಇದರ ಬಗ್ಗೆ ಜಾಸ್ತಿ ತಿಳುಕೊಳ್ಳೋಕೆ “ದೇವರ ಸರ್ಕಾರ ಭೂಮಿಯಲ್ಲಿ ಯಾವ ಸುಧಾರಣೆ ತರುತ್ತೆ?” ಅನ್ನೋ ಲೇಖನ ನೋಡಿ.

a ಈ ಅಂಕಿಅಂಶಗಳನ್ನು ಯುನೈಟೆಡ್‌ ಸ್ಟೇಟ್ಸ್‌ ನ್ಯಾಷನಲ್‌ ಜಿಯೋಫಿಸಿಕಲ್‌ ಡೇಟಾ ಸೆಂಟರ್‌ರವರ ಗ್ಲೋಬಲ್‌ ಸಿಗ್ನಿಫಿಕೆಂಟ್‌ ಅರ್ಥ್‌ಕ್ವೇಕ್‌ ಡೇಟಾಬೇಸ್‌ನಿಂದ ಪಡೆಯಲಾಗಿದೆ.