ಸ್ನಾನಿಕ ಯೋಹಾನ ನಿಜವಾಗಲೂ ಇದ್ದನಾ?
ಸುವಾರ್ತಾ ಪುಸ್ತಕಗಳಲ್ಲಿ ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದ (ಸ್ನಾನಿಕ) ಯೋಹಾನ ಅನ್ನುವ ಒಬ್ಬನ ಬಗ್ಗೆ ಇದೆ. ಅವನು ದೇವರ ಆಳ್ವಿಕೆಯ ಬಗ್ಗೆ ಯೂದಾಯದಲ್ಲಿ ಸಾರುತ್ತಿದ್ದ. ಇವನ ಬಗ್ಗೆ ಬೈಬಲಲ್ಲಿರುವ ಮಾಹಿತಿ ನಿಜವೋ? ನೋಡೋಣ ಬನ್ನಿ:
“ಆ ಕಾಲದಲ್ಲಿ, ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಯೂದಾಯದ ಕಾಡಿಗೆ ಬಂದು ಸಾರ್ತಿದ್ದ. ‘ಪಶ್ಚಾತ್ತಾಪಪಡಿ, ಯಾಕಂದ್ರೆ ಸ್ವರ್ಗದ ಆಳ್ವಿಕೆ ಹತ್ರ ಇದೆ’ ಅಂತ ಹೇಳ್ತಾ ಇದ್ದ” ಎಂದು ಬೈಬಲ್ ಹೇಳುತ್ತದೆ. (ಮತ್ತಾಯ 3:1, 2) ಈ ಮಾತನ್ನು ಇತಿಹಾಸಕಾರರು ಒಪ್ಪುತ್ತಾರಾ? ಹೌದು.
ಒಂದನೇ ಶತಮಾನದ ಇತಿಹಾಸಕಾರ ಫ್ಲೇವಿಯಸ್ ಜೋಸೀಫಸ್ “ಸ್ನಾನಿಕ ಎಂಬ ಅಡ್ಡ ಹೆಸರಿದ್ದ ಯೋಹಾನನ” ಬಗ್ಗೆ ಹೇಳಿದ. ಯೋಹಾನ “ಯೆಹೂದ್ಯರಿಗೆ ನ್ಯಾಯನೀತಿಯಿಂದ ನಡೆಯಿರಿ, ದೇವರಲ್ಲಿ ಭಕ್ತಿ ಇಡಿ, ದೀಕ್ಷಾಸ್ನಾನ ಪಡೆಯಿರಿ ಎಂದು ಪ್ರೋತ್ಸಾಹಿಸಿದ” ಅಂತ ಜೋಸೀಫಸ್ ಹೇಳಿದ.—ಯೆಹೂದಿ ಪುರಾತತ್ವ 18 ನೇ ಪುಸ್ತಕ (ಇಂಗ್ಲಿಷ್).
ಗಲಿಲಾಯ ಮತ್ತು ಪೆರಿಯದ ಅಧಿಪತಿಯಾಗಿದ್ದ ಹೆರೋದ ಅಂತಿಪನನ್ನು ಯೋಹಾನ ಬೈದನೆಂದು ಬೈಬಲ್ ಹೇಳುತ್ತದೆ. ತಾನೊಬ್ಬ ಯೆಹೂದಿ, ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುತ್ತೇನೆ ಅಂತ ಅಂತಿಪ ಹೇಳಿಕೊಳ್ಳುತ್ತಿದ್ದ. ಅವನು ಸಹೋದರನ ಹೆಂಡತಿಯಾದ ಹೆರೋದ್ಯಳನ್ನು ಮದುವೆಯಾದದ್ದು ತಪ್ಪು ಅಂತ ಯೋಹಾನ ಹೇಳಿದನು. (ಮಾರ್ಕ 6:18) ಈ ವಿಷಯಕ್ಕೆ ಬೇರೆ ಪುರಾವೆ ಇದೆಯಾ?
ಇತಿಹಾಸಕಾರ ಜೋಸೀಫಸ್ ಹೇಳುವುದೇನಂದರೆ, ಅಂತಿಪ “ಹೆರೋದ್ಯಳನ್ನು ಪ್ರೀತಿಸಿ ನಾಚಿಕೆಯಿಲ್ಲದೆ ಮದುವೆಯಾಗೋಣ ಅಂತ ಹೇಳಿದ.” ಹೆರೋದ್ಯಳು ಅದಕ್ಕೆ ಒಪ್ಪಿಕೊಂಡಳು. ಅವಳು ಗಂಡನನ್ನು ಬಿಟ್ಟು ಅಂತಿಪನನ್ನು ಮದುವೆಯಾದಳು.
“ಯೆರೂಸಲೇಮ್, ಯೂದಾಯ ಮತ್ತು ಯೋರ್ದನಿನ ಸುತ್ತಲಿರೋ ಎಲ್ಲ ಪ್ರದೇಶಗಳ ಜನ್ರು ಇವನ [ಯೋಹಾನನ] ಹತ್ರ ಹೋಗ್ತಿದ್ರು. ... ಯೋರ್ದನ್ ನದಿಯಲ್ಲಿ ಅವನಿಂದ ದೀಕ್ಷಾಸ್ನಾನ ಮಾಡಿಸ್ಕೊಳ್ತಿದ್ರು” ಅನ್ನುತ್ತದೆ ಬೈಬಲ್.—ಮತ್ತಾಯ 3:5, 6.
ಈ ವಿಷಯವನ್ನು ಕೂಡ ಜೋಸೀಫಸ್ ಒಪ್ಪುತ್ತಾನೆ. ಜನರು ಯೋಹಾನನನ್ನು ನೋಡಲು “ಗುಂಪುಗುಂಪಾಗಿ” ಬರುತ್ತಿದ್ದರು ಮತ್ತು “ಅವನು ಕೊಡುತ್ತಿದ್ದ ಭಾಷಣಗಳು ಜನರ ಮೇಲೆ ತುಂಬ ಪ್ರಭಾವ ಬೀರುತ್ತಿದ್ದವು” ಎಂದು ಅವನು ಬರೆದಿದ್ದಾನೆ.
ಸ್ನಾನಿಕ ಯೋಹಾನ ನಿಜವಾಗಲೂ ಇದ್ದನು ಅಂತ ಒಂದನೇ ಶತಮಾನದ ಇತಿಹಾಸಕಾರ ಜೋಸೀಫಸ್ ನಂಬಿದ್ದನು. ನಾವು ಕೂಡ ಪೂರ್ತಿ ನಂಬಬಹುದು.