ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Francesco Carta fotografo/Moment via Getty Images

ಹೆಚ್ಚಾಗುತ್ತಿರುವ ಒಂಟಿತನದ ಸಮಸ್ಯೆ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಹೆಚ್ಚಾಗುತ್ತಿರುವ ಒಂಟಿತನದ ಸಮಸ್ಯೆ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಇತ್ತೀಚೆಗೆ ಮಾಡಿದ ಒಂದು ಸರ್ವೇಯಿಂದ a ನಾಲ್ಕು ಜನರಲ್ಲಿ ಒಬ್ಬರಿಗೆ ಒಂಟಿತನ ಕಾಡ್ತಿದೆ ಅಂತ ಗೊತ್ತಾಗಿದೆ.

  •   “ಜನರು ಎಲ್ಲೇ ಇದ್ರೂ, ಅವ್ರಿಗೆ ಎಷ್ಟೇ ವಯಸ್ಸಾಗಿದ್ರೂ, ಯಾರಿಗೆ ಬೇಕಾದ್ರೂ ಈ ಒಂಟಿತನ ಬರುತ್ತೆ.”—ಚಿಡೋ ಎಂಪಂಬಾ, ವಿಶ್ವ ಆರೋಗ್ಯ ಸಂಸ್ಥೆಯ ಸಾಮಾಜಿಕ ಸಂಪರ್ಕ ಆಯೋಗದ ಸಹ ಅಧ್ಯಕ್ಷ.

 ವಯಸ್ಸಾದವರಿಗೆ ಮತ್ತು ಯಾರು ಜನರ ಜೊತೆ ಬೆರೆಯೋದಿಲ್ವೋ ಅವ್ರಿಗೆ ಮಾತ್ರ ಒಂಟಿತನ ಕಾಡುತ್ತೆ ಅಂತ ತುಂಬಾ ಜನ ಅಂದುಕೊಳ್ಳುತ್ತಾರೆ. ಆದ್ರೆ ನಿಜ ಏನಂದ್ರೆ ಯುವಜನರಿಗೆ, ಆರೋಗ್ಯವಂತರಿಗೆ, ಜೀವನದಲ್ಲಿ ಯಶಸ್ಸನ್ನ ಕಂಡವರಿಗೆ, ಮದುವೆ ಆದವರಿಗೂ ಈ ಒಂಟಿತನ ಕಾಡುತ್ತೆ. ಒಂಟಿತನ ಅಥವಾ ಸಮಾಜದಿಂದ ಪ್ರತ್ಯೇಕವಾಗಿರುವುದು, ಒಬ್ಬ ವ್ಯಕ್ತಿಯ ಶಾರೀರಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತೆ.

  •   “ಒಂಟಿತನ ಬರೀ ಒಂದು ಕೆಟ್ಟ ಭಾವನೆ ಅಷ್ಟೇ ಅಲ್ಲ ಅದರಲ್ಲಿ ತುಂಬಾ ವಿಷಯ ಸೇರಿದೆ. ಈ ಒಂಟಿತನ ತುಂಬ ಅಪಾಯಕಾರಿ, ಒಬ್ಬ ವ್ಯಕ್ತಿ ದಿನಕ್ಕೆ 15 ಸಿಗರೇಟ್‌ ಸೇದಿದ್ರೆ ಆರೋಗ್ಯಕ್ಕೆ ಎಷ್ಟು ಹಾನಿ ಆಗುತ್ತೋ ಅಷ್ಟೇ ಹಾನಿ ಈ ಒಂಟಿತನದಿಂದ ಆಗುತ್ತೆ” ಅಂತ ಯು.ಎಸ್‌. ಸರ್ಜನ್‌ ವಿವೇಕ್‌ ಮೂರ್ತಿ ಹೇಳ್ತಾರೆ.

ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ನಾವು ಒಂಟಿಯಾಗಿ ಇರೋದು ನಮ್ಮ ಸೃಷ್ಟಿಕರ್ತನಿಗೆ ಒಂಚೂರು ಇಷ್ಟ ಇಲ್ಲ. ಮನುಷ್ಯರು ಎಲ್ಲರ ಜೊತೆ ಸಂತೋಷವಾಗಿ ನೆಮ್ಮದಿಯಿಂದ ಇರಬೇಕು ಅನ್ನೋದೇ ದೇವರ ಆಸೆ.

  •   ಬೈಬಲ್‌ ತತ್ವ: “ಯೆಹೋವ ದೇವರು ‘ಮನುಷ್ಯ ಒಬ್ಬನೇ ಇರೋದು ಒಳ್ಳೇದಲ್ಲ’ . . . ಅಂದನು.”—ಆದಿಕಾಂಡ 2:18.

 ದೇವರ ಜೊತೆ ಮನುಷ್ಯರು ಸ್ನೇಹ ಬೆಳೆಸ್ಕೊಳ್ಳಬೇಕು ಅನ್ನೋದು ಆತನ ಆಸೆ. ನಾವು ಆತನಿಗೆ ಹತ್ರ ಆಗೋದಕ್ಕೆ ಪ್ರಯತ್ನ ಪಟ್ಟರೆ ಆತನು ನಮಗೆ ಹತ್ರ ಆಗ್ತಾನೆ ಅಂತ ಮಾತು ಕೊಟ್ಟಿದ್ದಾನೆ.—ಯಾಕೋಬ 4:8.

  •   ಬೈಬಲ್‌ ತತ್ವ: “ದೇವರ ಮಾರ್ಗದರ್ಶನ ಬೇಕಂತ ಅರ್ಥ ಮಾಡ್ಕೊಳ್ಳುವವರು ಖುಷಿಯಾಗಿ ಇರ್ತಾರೆ. ಯಾಕಂದ್ರೆ ದೇವರ ಆಳ್ವಿಕೆ ಅವ್ರಿಗಂತಾನೇ ಬರುತ್ತೆ.”—ಮತ್ತಾಯ 5:3.

 ನಾವು ಬೇರೆಯವರ ಜೊತೆ ಸೇರಿ ದೇವರನ್ನ ಆರಾಧನೆ ಮಾಡಬೇಕು ಅಂತ ಆತನು ಬಯಸ್ತಾನೆ. ಹೀಗೆ ಮಾಡಿದ್ರೆ ನಾವು ಖುಷಿ ಖುಷಿಯಾಗಿ ಇರ್ತೀವಿ.

  •   ಬೈಬಲ್‌ ತತ್ವ: “ನಾವು ಒಬ್ರು ಇನ್ನೊಬ್ರ ಬಗ್ಗೆ ತುಂಬ ಆಸಕ್ತಿ ತೋರಿಸೋಣ. ಆಗ ಪ್ರೀತಿ ತೋರಿಸೋಕೆ, ಒಳ್ಳೇ ಕೆಲಸಗಳನ್ನ ಮಾಡೋಕೆ ಬೇರೆಯವ್ರಿಗೆ ಪ್ರೋತ್ಸಾಹ ಕೊಡಬಹುದು. ಒಟ್ಟಾಗಿ ಸಭೆ ಸೇರೋದನ್ನ ಬಿಡೋದು ಬೇಡ . . . ಒಬ್ರು ಇನ್ನೊಬ್ರನ್ನ ಪ್ರೋತ್ಸಾಹಿಸ್ತಾ ಇರೋಣ.”—ಇಬ್ರಿಯ 10:24, 25.

 ಒಂಟಿತನದ ವಿರುದ್ಧ ಹೋರಾಡೋದು ಯಾಕೆ ಪ್ರಾಮುಖ್ಯ ಅಂತ ತಿಳ್ಕೊಳ್ಳೋಕೆ “ಒಂಟಿತನ ಕಾಡಿದಾಗ . . .” ಅನ್ನೋ ಲೇಖನ ನೋಡಿ.

a The Global State of Social Connections, by Meta and Gallup, 2023.