ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು

ತುಂಬ ಪ್ರಾಮುಖ್ಯವಾದ ಪುಸ್ತಕದ ತಯಾರಿ

ತುಂಬ ಪ್ರಾಮುಖ್ಯವಾದ ಪುಸ್ತಕದ ತಯಾರಿ

ಜನವರಿ 1, 2021

 “ನಾನು ಇದಕೋಸ್ಕರ 19 ವರ್ಷಗಳಿಂದ ಕಾಯ್ತಿದ್ದೆ.” ಈ ಸಹೋದರ ಅಷ್ಟು ವರ್ಷಗಳಿಂದ ಯಾವುದಕ್ಕೋಸ್ಕರ ಕಾಯ್ತಿದ್ರು? ಅವರ ಸ್ವಂತ ಭಾಷೆಯಾದ ಬೆಂಗಾಲಿಯಲ್ಲಿ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರಕ್ಕಾಗಿ ಕಾಯ್ತಿದ್ರು. ತಮ್ಮ ಸ್ವಂತ ಭಾಷೆಯಲ್ಲಿ ಹೊಸ ಲೋಕ ಭಾಷಾಂತರ ಬಿಡುಗಡೆಯಾದಾಗ ತುಂಬ ಸಹೋದರ ಸಹೋದರಿಯರಿಗೆ ಹೀಗೆ ಅನಿಸಿದೆ. ಆದ್ರೆ ಒಂದು ಬೈಬಲನ್ನ ಭಾಷಾಂತರ ಮಾಡಿ ಅದನ್ನ ಮುದ್ರಣ ಮಾಡೋದ್ರಲ್ಲಿ ಏನೆಲ್ಲ ಒಳಗೂಡಿದೆ ಅಂತ ನಿಮಗೆ ಗೊತ್ತಾ?

 ಆಡಳಿತ ಮಂಡಲಿಯ ರೈಟಿಂಗ್‌ ಕಮಿಟಿಯ ನಿರ್ದೇಶನದ ಪ್ರಕಾರ ಮೊದಲು ಒಂದು ಭಾಷಾಂತರ ತಂಡವನ್ನ ಆರಿಸಿಕೊಳ್ಳಲಾಗುತ್ತೆ. ಒಂದು ಬೈಬಲ್‌ ಭಾಷಾಂತರ ಮಾಡೋಕೆ ಎಷ್ಟು ಸಮಯ ಹಿಡಿಯುತ್ತೆ. ನ್ಯೂ ಯಾರ್ಕ್‌ನ ವಾರ್ವಿಕ್‌ನಲ್ಲಿರೋ ಟ್ರಾನ್ಸ್‌ಲೇಷನ್‌ ಸರ್ವಿಸಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡೋ ನಿಕೋಲಸ್‌ ಅಲ್ಲಾಡಿಸ್‌ ಅವರು ಹೀಗೆ ಹೇಳ್ತಾರೆ: “ಬೈಬಲನ್ನ ಭಾಷಾಂತರ ಮಾಡೋವಾಗ ತುಂಬ ವಿಷಯಗಳ ಕಡೆ ಗಮನ ಕೊಡಬೇಕಾಗುತ್ತೆ. ಈ ಪ್ರಾಜೆಕ್ಟ್‌ ನಲ್ಲಿ ಕೆಲಸ ಮಾಡೋಕೆ ಎಷ್ಟು ಜನ ಭಾಷಾಂತರಕಾರರು ಇದ್ದಾರೆ. ಆ ಭಾಷೆ ಕಷ್ಟ ಇದ್ಯಾ, ಸುಲಭ ಇದ್ಯಾ? ಅದನ್ನ ಓದುವವರಿಗೆ ಬೈಬಲ್‌ ಸಮಯದಲ್ಲಿ ಜೀವನ ಹೇಗಿತ್ತು ಅನ್ನೋದು ಎಷ್ಟರ ಮಟ್ಟಿಗೆ ಅರ್ಥ ಆಗುತ್ತೆ. ಆ ಭಾಷೆಯನ್ನ ಬೇರೆಬೇರೆ ಪ್ರದೇಶದಲ್ಲಿ ಬೇರೆಬೇರೆ ತರ ಮಾತಾಡ್ತಾರಾ? ಬರೀ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥನ ಭಾಷಾಂತರ ಮಾಡಲಿಕ್ಕೆ ಏನಿಲ್ಲ ಅಂದ್ರೂ ಸುಮಾರು 3 ವರ್ಷ ಹಿಡಿಯಬಹುದು. ಇಡೀ ಬೈಬಲನ್ನ ಭಾಷಾಂತರ ಮಾಡಲಿಕ್ಕೆ 4 ಅಥವಾ ಅದಕ್ಕಿಂತ ಜಾಸ್ತಿ ವರ್ಷ ಹಿಡಿಯಬಹುದು. ಸೈನ್‌ ಲ್ಯಾಂಗ್ವೇಜಲ್ಲಿ ಭಾಷಾಂತರ ಮಾಡಲಿಕ್ಕೆ ಇನ್ನೂ ಜಾಸ್ತಿ ವರ್ಷ ಹಿಡಿಯುತ್ತೆ.”

 ಒಂದು ಬೈಬಲನ್ನ ಭಾಷಾಂತರ ಮಾಡಬೇಕಂದ್ರೆ ಬರೀ ಒಂದು ಭಾಷಾಂತರ ತಂಡ ಇದ್ರೆ ಸಾಕಾಗಲ್ಲ. ಈ ತಂಡಕ್ಕೆ ಬೇರೆಯವರು ಕೂಡ ಸಹಾಯ ಮಾಡ್ತಾರೆ. ಇವರು ಬೇರೆಬೇರೆ ಹಿನ್ನೆಲೆಯವರು, ದೇಶದವರು ಆಗಿರಬಹುದು. ಇದನ್ನ ಅವರು ಸೇವೆ ಅಂತ ಅಂದ್ಕೊಂಡು ಮಾಡ್ತಾರೆ ಹೊರತು ಹಣಕ್ಕೋಸ್ಕರ ಮಾಡಲ್ಲ. ಬೈಬಲನ್ನ ನಿಖರವಾಗಿ, ಸ್ಪಷ್ಟವಾಗಿ ಅರ್ಥ ಆಗೋ ತರ ಭಾಷಾಂತರ ಮಾಡಲಿಕ್ಕೆ ಇವರು ಕೊಡೋ ಫೀಡ್‌ಬ್ಯಾಕ್‌ ಭಾಷಾಂತರಕಾರರಿಗೆ ಸಹಾಯಮಾಡುತ್ತೆ. ಬೈಬಲ್‌ ಭಾಷಾಂತರ ಮಾಡೋದು ಒಂದು ದೊಡ್ಡ ಜವಾಬ್ದಾರಿ ಆಗಿರೋದ್ರಿಂದ ಅದನ್ನ ತುಂಬ ಜಾಗ್ರತೆ ವಹಿಸಿ ಮಾಡ್ತಾರೆ ಅಂತ ಸೌತ್‌ ಆಫ್ರಿಕದಲ್ಲಿ ಬೈಬಲ್‌ ಭಾಷಾಂತರಕಾರರಿಗೆ ಟ್ರೇನಿಂಗ್‌ ಕೊಡೋ ಒಬ್ಬ ಸಹೋದರ ಹೇಳ್ತಾನೆ.

 ಬೈಬಲನ್ನ ಭಾಷಾಂತರ ಮಾಡಿ ಮುಗಿಸಿದ ಮೇಲೆ ಅದನ್ನ ಪ್ರಿಂಟ್‌ ಮಾಡಿ ಅದಕ್ಕೆ ಬೈಂಡ್‌ ಹಾಕಬೇಕು. ಇದನ್ನ ಮಾಡೋಕೆ 10 ಐಟಂ ಆದ್ರೂ ಇರಬೇಕು. ಉದಾಹರಣೆಗೆ ಪೇಪರ್‌, ಇಂಕ್‌, ಅದಕ್ಕೆ ಹಾಕೋಕೆ ಕವರ್‌, ಗಮ್‌, ಕವರ್‌ ಲೈನರ್ಸ್‌, ಅದಕ್ಕೆ ಹಚ್ಚೋಕೆ ಸಿಲ್ವರ್‌ ಕಲರ್‌ ಬಣ್ಣ, ರಿಬ್ಬನ್ಸ್‌, ಹೆಡ್‌ ಬ್ಯಾಂಡ್ಸ್‌, ಸ್ಪೈನ್‌ ಸ್ಟಿಫ್‌ನರ್ಸ್‌, ಕ್ಯಾಪಿಂಗ್‌ ಮೆಟಿರಿಯಲ್‌ ಇವೆಲ್ಲ ಬೇಕಾಗುತ್ತೆ. 2019 ರಲ್ಲಿ ಬೈಬಲನ್ನ ಪ್ರಿಂಟ್‌ ಮಾಡೋಕೆ ಸುಮಾರು 147 ಕೋಟಿಯಷ್ಟು ಹಣ ಖರ್ಚುಮಾಡಿದ್ದಾರೆ. ಪ್ರಿಂಟರಿಯಲ್ಲಿ ಕೆಲಸ ಮಾಡೋ ನಮ್ಮ ಸಹೋದರರು 3 ಲಕ್ಷಕ್ಕಿಂತ ಜಾಸ್ತಿ ತಾಸನ್ನ ಆ ವರ್ಷ ಬೈಬಲನ್ನ ಪ್ರಿಂಟ್‌ ಮಾಡಿ ಬೇರೆಬೇರೆ ಸ್ಥಳಗಳಿಗೆ ಸಾಗಿಸೋಕೆ ಕಳೆದಿದ್ದಾರೆ.

ನಾವು ತಯಾರಿಸೋ ಪುಸ್ತಕಗಳಲ್ಲೇ ತುಂಬ ಪ್ರಾಮುಖ್ಯವಾದ ಪುಸ್ತಕ ಬೈಬಲ್‌

 ಬೈಬಲನ್ನ ತಯಾರಿಸಲಿಕ್ಕೆ ಇಷ್ಟೊಂದು ಹಣ ಮತ್ತು ಸಮಯನ ನಾವ್ಯಾಕೆ ಖರ್ಚು ಮಾಡ್ತಿವಿ? ಅಂತರಾಷ್ಟ್ರೀಯ ಪ್ರಿಂಟಿಂಗ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸಮಾಡೋ ಸಹೋದರ ಜೋಯೆಲ್‌ ಬ್ಲೂರವರು ಹೀಗೆ ಹೇಳ್ತಾರೆ: “ನಾವು ತಯಾರಿಸುವ ಪುಸ್ತಕಗಳಲ್ಲೇ ತುಂಬ ಪ್ರಾಮುಖ್ಯವಾದ ಪುಸ್ತಕ ಬೈಬಲ್‌. ಅದಕ್ಕೆ ಅದು ನೋಡೋಕೆ ಚೆನ್ನಾಗಿ ಇರಬೇಕು ಅಂತ ನಾವು ಇಷ್ಟಪಡ್ತಿವಿ. ಆಗ ನಾವು ಆರಾಧನೆ ಮಾಡೋ ದೇವರಿಗೂ ಮತ್ತು ನಾವು ಸಾರೋ ಸಂದೇಶಕ್ಕೂ ಗೌರವ ತರುತ್ತೆ.”

 ಬೈಬಲನ್ನ ಬರೀ ಸಾಮಾನ್ಯ ಜನರಿಗೋಸ್ಕರ ಮಾತ್ರ ಅಲ್ಲ ಕಣ್ಣು ಕಾಣದೆ ಇರೋರಿಗೆ ಮತ್ತು ಜೈಲಲ್ಲಿರೋ ಕೈದಿಗಳಿಗೋಸ್ಕರ ಕೂಡ ನಾವು ಹೊಸ ಲೋಕ ಭಾಷಾಂತರ ಬೈಬಲನ್ನ ತಯಾರಿಸ್ತೀವಿ. ಉದಾಹರಣೆಗೆ ಹೊಸ ಲೋಕ ಭಾಷಾಂತರ ಬ್ರೇಲ್‌ನಲ್ಲಿ 10 ಭಾಷೆಗಳಲ್ಲಿದೆ. ಬ್ರೇಲ್‌ ಲಿಪಿಯಲ್ಲಿ ಒಂದೇ ಒಂದು ಬೈಬಲನ್ನ ತಯಾರಿಸಲಿಕ್ಕೆ 8 ತಾಸು ಹಿಡಿಯುತ್ತೆ. ಹೀಗೆ ತಯಾರಿಸಿದ ಸಂಪುಟಗಳನ್ನ ಒಂದೇ ಕಡೆ ಇಡೋಕೆ ಏನಿಲ್ಲ ಅಂದ್ರೂ 7.5 ಅಡಿಯಷ್ಟು ಜಾಗ ಬೇಕಾಗುತ್ತೆ. ಜೈಲಲ್ಲಿರೋ ಕೈದಿಗಳಿಗೋಸ್ಕರ ಕೂಡ ನಾವು ವಿಶೇಷವಾದ ಬೈಬಲನ್ನ ತಯಾರಿಸ್ತೀವಿ. ಯಾಕಂದ್ರೆ ಅಲ್ಲಿ ಪೇಪರಿಂದ ಬೈಂಡ್‌ ಮಾಡಿರೋ ಪುಸ್ತಕಗಳನ್ನ ಮಾತ್ರ ಅನುಮತಿಸ್ತಾರೆ.

 ಹೊಸ ಲೋಕ ಭಾಷಾಂತರಕ್ಕೆ ಓದುಗರ ಜೀವನವನ್ನೇ ಬದಲಾಯಿಸುವಂಥ ಶಕ್ತಿ ಇದೆ. ಕಾಂಗೋ ಪ್ರಜಾಪ್ರಭುತ್ವ ಗಣರಾಜ್ಯದ ಟಾಂಬೆ ಅನ್ನೋ ಸ್ಥಳದಲ್ಲಿ ಕಿಲುಬ ಭಾಷೆಯ ಸಭೆಯಿದೆ. ಕಾಂಗೋ ಪ್ರಜಾಪ್ರಭುತ್ವ ಗಣರಾಜ್ಯದ ರಾಜಧಾನಿಯಿಂದ ಟಾಂಬೆ ಸುಮಾರು 1,700 ಕಿ.ಮಿ ದೂರದಲ್ಲಿದೆ. ಅಲ್ಲಿರೋ ಯೆಹೋವನ ಸಾಕ್ಷಿಗಳ ಹತ್ರ ಒಂದೇ ಒಂದು ಬೈಬಲ್‌ ಇತ್ತು. ಅದು ಕಿಲುಬ ಭಾಷೆಯಲ್ಲಿ ಇದ್ರೂ ತುಂಬ ಹಳೇ ಭಾಷೆ ಆಗಿದ್ರಿಂದ ಅದನ್ನ ಓದಿದ್ರೂ ಏನೂ ಅರ್ಥ ಆಗ್ತಿರಲಿಲ್ಲ. ಒಂದೇ ಬೈಬಲನ್ನ ಇಟ್ಕೊಂಡು ಅಲ್ಲಿರೋ ಸಹೋದರರು ಮೀಟಿಂಗ್‌ಗಳಿಗೆ ತಯಾರಿ ಮಾಡ್ತಿದ್ರು. ಒಬ್ಬರು ಪ್ರಿಪೇರ್‌ ಆದ ಮೇಲೆ ಬೈಬಲನ್ನ ಇನ್ನೊಬ್ಬರಿಗೆ ಕೊಡ್ತಿದ್ರು. ಆದ್ರೆ ಆಗಸ್ಟ್‌ 2018 ರಿಂದ ಕಿಲುಬ ಭಾಷೆಯಲ್ಲಿ ಹೊಸ ಲೋಕ ಭಾಷಾಂತರ ಬೈಬಲ್‌ ಸಭೆಯಲ್ಲಿರೋ ಪ್ರತಿಯೊಬ್ರಿಗೂ ಸಿಕ್ತು. ಜನರಿಗೆ ಅರ್ಥ ಆಗೋ ಭಾಷೆಯಲ್ಲಿ ಈ ಹೊಸ ಲೋಕ ಭಾಷಾಂತರ ಬೈಬಲ್‌ ಇದ್ದಿದ್ರಿಂದ ಎಲ್ರಿಗೂ ಚೆನ್ನಾಗಿ ಅರ್ಥ ಆಗ್ತಿತ್ತು.

 ಜರ್ಮನ್‌ ಮಾತಾಡೋ ಒಬ್ಬ ಸಹೋದರಿ ಪರಿಷ್ಕೃತ ಹೊಸ ಲೋಕ ಭಾಷಾಂತರದ ಬಗ್ಗೆ ಹೀಗೆ ಹೇಳಿದಳು: “ಬೈಬಲ್‌ ಓದಬೇಕಲ್ಲಾ ಅಂತ ನಾನು ಓದಲ್ಲ. ಅದನ್ನ ಓದಕ್ಕೋಸ್ಕರ ಕಾಯ್ತಾ ಇರ್ತಿನಿ.” ಜೈಲಲ್ಲಿರೋ ಒಬ್ಬ ಕೈದಿ ಹೀಗೆ ಹೇಳ್ತಾನೆ: “ನನಗೆ ಹೊಸ ಲೋಕ ಭಾಷಾಂತರ ಬೈಬಲ್‌ ಸಿಕ್ತು. ಅದು ನನ್ನ ಜೀವನವನ್ನೇ ಬದಲಾಯಿಸ್ತು. ಈ ಭಾಷಾಂತರ ಓದಿದಾಗ, ಯಾವತ್ತೂ ನನಗೆ ಬೈಬಲ್‌ ಇಷ್ಟು ಚೆನ್ನಾಗಿ ಅರ್ಥ ಆಗಿರಲಿಲ್ಲ ಅನ್ನೋದು ನನಗೆ ಗೊತ್ತಾಯ್ತು. ಯೆಹೋವನ ಸಾಕ್ಷಿಗಳ ಬಗ್ಗೆ ನಾನು ಇನ್ನೂ ಹೆಚ್ಚು ತಿಳ್ಕೊಬೇಕು ಮತ್ತು ಅವರ ತರನೇ ನಾನು ಆಗಬೇಕು ಅನ್ನೋದೇ ನನ್ನ ಆಸೆ.”

 ಎಲ್ಲ ಓದುಗರು ಹೊಸ ಲೋಕ ಭಾಷಾಂತರ ಬೈಬಲನ್ನ ತಯಾರಿಸಲಿಕ್ಕೆ ಜನರು ನೀಡಿರುವ ಕಾಣಿಕೆಗಳಿಗೆ ತುಂಬ ಥ್ಯಾಂಕ್ಸ್‌ ಹೇಳ್ತಾರೆ. donate.pr418.comನಲ್ಲಿ ನಾವು ಯಾವುದೆಲ್ಲ ರೀತಿಯಲ್ಲಿ ಕಾಣಿಕೆಗಳನ್ನ ಈ ಲೋಕ ಪೂರ್ತಿ ನಡಿತಿರೋ ಕೆಲಸಕ್ಕೆ ಕೊಡಬಹುದು ಅನ್ನೋದ್ರ ಬಗ್ಗೆ ಮಾಹಿತಿ ಇದೆ. ನೀವು ಧಾರಾಳವಾಗಿ ಕೊಡ್ತಿರೋ ಈ ಕಾಣಿಕೆಗಳಿಗೆ ನಾವು ತುಂಬ ಥ್ಯಾಂಕ್ಸ್‌ ಹೇಳ್ತಿವಿ.