ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು

ಮಹಾ ಪಿಡುಗಿನಲ್ಲಿ ಸಿಕ್ಕ ಸಹಾಯ

ಮಹಾ ಪಿಡುಗಿನಲ್ಲಿ ಸಿಕ್ಕ ಸಹಾಯ

ಜುಲೈ 1, 2021

 ಮಾರ್ಚ್‌ 2020ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್‌-19 ಒಂದು ಮಹಾಪಿಡುಗು ಅಂತ ಘೋಷಿಸ್ತು. ಒಂದು ವರ್ಷಕ್ಕಿಂತ ಹೆಚ್ಚು ಸಮಯ ಆದ್ರೂ ಈ ವೈರಸ್‌ ಇನ್ನೂ ಜನ್ರನ್ನ ಭಾದಿಸುತ್ತೆ ಅಂತ ಯಾರೂ ಯೋಚನೆ ಕೂಡ ಮಾಡಿರಲಿಲ್ಲ. ಲಕ್ಷಗಟ್ಟಲೆ ಜನ್ರು, ಕೆಲವು ಯೆಹೋವನ ಸಾಕ್ಷಿಗಳು ಕೂಡ ಈ ಮಹಾಪಿಡುಗಿನಿಂದಾಗಿ ದೈಹಿಕವಾಗಿ, ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ತುಂಬ ಕಷ್ಟಪಟ್ಟಿದ್ದಾರೆ. ಈ ಕಷ್ಟಕರ ಸಮಯದಲ್ಲಿ ಯೆಹೋವನ ಸಾಕ್ಷಿಗಳು ಹೇಗೆ ಸಂಘಟಿತರಾಗಿ ಪರಿಹಾರ ಕೆಲಸವನ್ನ ಮಾಡಿದ್ದಾರೆ?

ಅಗತ್ಯ ಇದ್ದವರಿಗೆ ಪರಿಹಾರ ಸಹಾಯ

 ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಸಂಯೋಜಕರ ಸಮಿತಿಯ ನಿರ್ದೇಶನದ ಅಡಿಯಲ್ಲಿ, ಕೋವಿಡ್‌-19 ಮಹಾಪಿಡುಗಿಗೆ ಸಂಬಂಧಿಸಿದ ಪರಿಹಾರ ಕೆಲಸ ಮಾಡೋಕೆ ಭೂವ್ಯಾಪಕವಾಗಿ 950ಕ್ಕೂ ಹೆಚ್ಚು ವಿಪತ್ತು ಪರಿಹಾರ ಸಮಿತಿಗಳನ್ನ (DRC) ಸ್ಥಾಪಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ, ಅವರು ಸ್ಥಳೀಯವಾಗಿ ಸಹಾಯದ ಏರ್ಪಾಡು ಮಾಡಿದ್ದಾರೆ ಮತ್ತು ಬೇರೆ ಸಂದರ್ಭಗಳಲ್ಲಿ, ಸಾಕ್ಷಿಗಳು ಸರ್ಕಾರದಿಂದ ಸಿಗೋ ಸಹಾಯದಿಂದ ಪ್ರಯೋಜನ ಪಡೆದಿದ್ದಾರೆ. DRCಗಳು ಕೂಡ ದೊಡ್ಡ ಪ್ರಮಾಣದ ಪರಿಹಾರ ಕೆಲಸಗಳನ್ನ ಏರ್ಪಾಡು ಮಾಡಿದ್ರು.

 ಉದಾಹರಣೆಗೆ, ಪರಾಗ್ವೆಯಲ್ಲಿದ್ದ ಸನ್ನಿವೇಶ ನೋಡೋಣ. ಮಹಾಪಿಡುಗುನಿಂದ ಆರ್ಥಿಕ ವ್ಯವಸ್ಥೆಯ ಮೇಲಾದ ಪರಿಣಾಮದ ಬಗ್ಗೆ ಹೇಳುತ್ತ ಒಂದು ವಾರ್ತಾಪತ್ರಿಕೆ “ಹೆಚ್ಚಿನ ಸಂಖ್ಯೆಯ ಪರಾಗ್ವೆಯನ್ನರು ತಮ್ಮ ಸ್ವಂತ ಮನೆಗಳಲ್ಲಿ ಹಸಿವಿನಿಂದ ಬಳಲುತ್ತಿದ್ದಾರೆ” ಅಂತ ವರದಿ ಮಾಡ್ತು. ಆದ್ರೆ ಪರಾಗ್ವೆಯಲ್ಲಿದ್ದ DRC ಈಗಾಗಲೇ ಎರಡು ವಾರಗಳಿಗೆ ಸಾಕಾಗುವಷ್ಟು ಸಾಮಾಗ್ರಿಗಳಿರುವ ಕಿಟ್‌ಗಳನ್ನ ವಿತರಿಸೋಕೆ ಪ್ರಾರಂಭಿಸ್ತು. ಈ ಕಿಟ್‌ಗಳಲ್ಲಿ ನಾಲ್ಕು ಜನ್ರ ಕುಟುಂಬಕ್ಕೆ ಸಾಕಾಗುವಷ್ಟು ಆಹಾರ, ಶುಚಿಗೊಳಿಸೋ ವಸ್ತುಗಳು ಹಾಗೂ ವೈಯಕ್ತಿಕ ನೈರ್ಮಲ್ಯಕ್ಕೆ ಬೇಕಾದ ವಸ್ತುಗಳು ಇತ್ತು. ಪ್ರತಿ ಕಿಟ್‌ ಸುಮಾರು $30 (US) ಅಂದ್ರೆ ಸುಮಾರು 2500ರೂ. ಬೆಲೆಯದ್ದಾಗಿತ್ತು.

 ಈ ಪರಿಹಾರ ಕೆಲಸದಲ್ಲಿ ಭಾಗವಹಿಸ್ತಿದ್ದವರು ತಮ್ಮನ್ನ ಮತ್ತು ಬೇರೆಯವರನ್ನ ಕೋವಿಡ್‌-19 ಸೋಂಕಿನಿಂದ ಹೇಗೆ ರಕ್ಷಿಸ್ಕೊಳ್ತಾರೆ? ಅವರು ಮಾಸ್ಕ್‌ ಧರಿಸ್ತಿದ್ರು ಹಾಗೂ ಸಾಮಾಜಿಕ ಅಂತರ ಕಾಪಾಡ್ಕೊಳ್ತಿದ್ರು. ಆಹಾರ ಸರಬರಾಜು ಮಾಡೋ ಕಂಪನಿಗಳು ಶುದ್ಧತೆ ಕಾಪಾಡ್ತಾ ಇದೆಯಾ ಮತ್ತು ಕಟ್ಟುನಿಟ್ಟಾದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ತಿದ್ದೀಯಾ ಅಂತ ಪರೀಕ್ಷಿಸ್ತಾರೆ. ಇದ್ರ ಜೊತೆ ಕಿಟ್‌ಗಳನ್ನ ಸಿದ್ಧ ಮಾಡೋ ಎಲ್ಲರೂ ವೈಯಕ್ತಿಕ ರಕ್ಷಣಾ ಸಾಧನಗಳನ್ನ ಧರಿಸ್ತಾರೆ, ತಮ್ಮ ವಾಹನಗಳನ್ನ ಶುದ್ಧಗೊಳಿಸಿ ಸೋಂಕುರಹಿತ ಮಾಡ್ತಾರೆ. ಕಿಟ್‌ಗಳನ್ನ ಸಂಗ್ರಹಿಸಿ ಇಡೋ ಜಾಗದಲ್ಲಿ ಶುದ್ಧತೆ ಕಾಪಾಡಲಾಗಿದೆಯಾ ಅಂತ ಖಚಿತಪಡಿಸ್ಕೊಳ್ತಾರೆ. ಅಷ್ಟೇ ಅಲ್ಲ, ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತ ಕಿಟ್‌ಗಳನ್ನ ವಿತರಿಸ್ತಾರೆ.

ಕಾಣಿಕೆಗಳ ಸರಿಯಾದ ಉಪಯೋಗ

 ಜನವರಿ 2021ರ ಪ್ರಕಾರ ಸಂಯೋಜಕರ ಸಮಿತಿ ಸುಮಾರು 2.5 ಕೋಟಿ ಹಣವನ್ನ ಕೋವಿಡ್‌ ಪರಿಹಾರಕ್ಕಾಗಿ ಬಳಸೋಕೆ ಒಪ್ಪಿಗೆ ಕೊಡ್ತು. ಅಗತ್ಯವಿರೋ ವಸ್ತುಗಳನ್ನ ಸರಿಯಾದ ಬೆಲೆಗೆ ತಗೊಳ್ಳೋಕೆ ಬ್ರಾಂಚ್‌ಗಳು ಮತ್ತು ವಿಪತ್ತು ಪರಿಹಾರ ಸಮಿತಿಗಳು ಈ ಹಣವನ್ನ ಜಾಗ್ರತೆಯಿಂದ ಖರ್ಚು ಮಾಡ್ತಾರೆ. ಉದಾಹರಣೆಗೆ, ಚಿಲಿ ದೇಶದಲ್ಲಿ ಪರಿಹಾರ ಕೆಲಸವನ್ನ ನೋಡ್ಕೊಳ್ತಿದ್ದ ಸಹೋದರರಿಗೆ 700ಕೆ.ಜಿ ಬೇಳೆಯನ್ನ ತಗೊಳ್ಳಬೇಕಾಗಿ ಬಂತು. ಆದ್ರೆ ಒಂದೇ ತಿಂಗಳಲ್ಲಿ ಬೇಳೆಯ ರೇಟು ಎರಡು ಪಟ್ಟು ಜಾಸ್ತಿ ಆಗಿತ್ತು. ಜಾಸ್ತಿ ಆಗಿರೋ ರೇಟಿಗೆ ಬೇಳೆಯನ್ನ ತಗೊಳ್ಳೋ ನಿರ್ಧಾರ ಮಾಡಿ 2 ಗಂಟೆಯಷ್ಟರಲ್ಲಿ ಅಂಗಡಿ ಮಾಲಿಕ, ಈಗಾಗಲೇ ಬೇಳೆ ತಗೊಂಡಿದ್ದ ಒಬ್ಬ ವ್ಯಕ್ತಿ ಅದನ್ನ ವಾಪಸ್‌ ಕೊಟ್ಟಿದ್ದಾನೆ ಅಂತ ಹೇಳಿದನು. ಹಾಗಾಗಿ ಜಾಸ್ತಿ ರೇಟಿಗೆ ಬೇಳೆಯನ್ನ ಮಾರೋ ಬದಲು ಹಿಂದಿನ ತಿಂಗಳು ಬೇಳೆ ರೇಟ್‌ ಎಷ್ಟು ಇತ್ತೋ ಅದೇ ರೇಟಿಗೆ ಕೊಡ್ತೀನಿ ಅಂತ ಅಂಗಡಿಯವನು ಒಪ್ಕೊಂಡ.

 ನಮ್ಮ ಸಹೋದರರು ಅಂಗಡಿಗೆ ಹೋಗಿ ಬೇಳೆಯನ್ನ ಖರೀದಿ ಮಾಡೋವಾಗ ಆ ಅಂಗಡಿ ಮಾಲಿಕ ನೀವು ಆಹಾರ ವಿತರಣೆಯಲ್ಲಿ ಬೇರೆ ಸಂಘಟನೆಯವರ ತರ ಭೇದ-ಭಾವ ಮಾಡ್ತಿದ್ದೀರಾ ಅನ್ನೋ ಆರೋಪ ಹಾಕಿದ. ಇದನ್ನ ಕೇಳಿ ನಮ್ಮ ಸಹೋದರರು ತಮ್ಮ ಮನಸ್ಸಲ್ಲಿ ಪ್ರಾರ್ಥನೆ ಮಾಡಿದ್ರು. ಆಮೇಲೆ ಅವರು ಅಂಗಡಿ ಮಾಲಿಕನಿಗೆ, ಸಭೆಯಲ್ಲಿ ಯಾರಿಗೆ ವಸ್ತುಗಳ ಅಗತ್ಯ ನಿಜವಾಗ್ಲೂ ಇದೆಯೋ ಅಂಥವ್ರಿಗೆ ಮಾತ್ರ ಕೊಡ್ತೀವಿ ಅಂತ ಹೇಳಿದ್ರು. ಅಷ್ಟೇ ಅಲ್ಲ, ಪ್ರತಿ ಕುಟುಂಬಕ್ಕೆ ಯಾವ ವಸ್ತುಗಳ ಅಗತ್ಯ ಇದೆಯೋ ಅದನ್ನೇ ಕೊಡ್ತೀವಿ ಅಂತಾನೂ ವಿವರಿದ್ರು. ಯೆಹೋವನ ಸಾಕ್ಷಿಗಳು ಕೊಡೋ ಹಣ ಇರಲಿ ಅಥವಾ ಪಡೋ ಶ್ರಮ ಇರಲಿ ಅದೆಲ್ಲ ಸ್ವಯಂಪ್ರೇರಿತವಾಗಿ ಬರುತ್ತೆ ಅಂತನೂ ನಮ್ಮ ಸಹೋದರರು ವಿವರಿಸಿದ್ರು. ಇದನ್ನೆಲ್ಲ ಕೇಳಿ ಅವನಿಗೆ ತುಂಬಾ ಆಶ್ಚರ್ಯ ಆಯ್ತು. ಹಾಗಾಗಿ 700ಕೆ.ಜಿ ಬೇಳೆಯನ್ನ ಕಡಿಮೆ ರೇಟಿಗೆ ಕೊಡೋದಲ್ಲದೆ ಮುಂದಿನ ತಿಂಗಳಿಗೆ 400ಕೆ.ಜಿ ಬೇಳೆಯನ್ನ ಫ್ರೀ ಆಗಿ ಕೊಡೋಕೂ ಅವನು ಆತನು ಮನಸ್ಸು ಮಾಡಿದ.

“ಇದೇ ನಿಜವಾದ ಪ್ರೀತಿ”

 ಲೈಬೀರಿಯ ದೇಶದ ವಯಸ್ಸಾದ ವಿಧವೆ ಸಹೋದರಿಯಾದ ಲೂಸೋ ಅವ್ರ ಉದಾಹರಣೆ ನೋಡಿ. ಇವ್ರ ಕುಟುಂಬದಲ್ಲಿ ಐದು ಜನ ಇದ್ದಾರೆ. ಒಂದಿನ ಅವ್ರೆಲ್ಲ ತಿಂಡಿ ತಿಂದು ದಿನದ ವಚನ ಓದಿದ ಮೇಲೆ ಅವ್ರ ಏಳು ವರ್ಷದ ಮೊಮ್ಮಗ ಮನೇಲಿ ಬೇರೆ ಏನು ಆಹಾರ ಇಲ್ಲದೆ ಇರೋದನ್ನ ನೋಡಿ “ಮಧ್ಯಾಹ್ನ ಊಟಕ್ಕೆ ನಾವೇನು ತಿನ್ನೋದು” ಅಂತ ಕೇಳ್ತಾನೆ. ಆಗ ಲೂಸೋ ನಾನು ಇದ್ರ ಬಗ್ಗೆ ಈಗಾಗಲೇ ಯೆಹೋವ ದೇವರಿಗೆ ಪ್ರಾರ್ಥನೆಯಲ್ಲಿ ಹೇಳಿದ್ದೀನಿ. ಒಂದಲ್ಲ ಒಂದು ರೀತಿ ಯೆಹೋವನು ಸಹಾಯ ಮಾಡೇ ಮಾಡ್ತಾನೆ ಅನ್ನೋ ನಂಬಿಕೆ ನನಗಿದೆ ಅಂತ ಹೇಳ್ತಾರೆ. ಅದೇ ದಿನ ಮಧ್ಯಾಹ್ನ ಲೂಸೋಗೆ ವಿಪತ್ತು ಪರಿಹಾರ ಸಮಿತಿಯ ಸಹೋದರರಿಂದ ಫೋನ್‌ ಬರುತ್ತೆ. ಅವರು ಆಹಾರಕ್ಕಾಗಿ ದಿನಸಿ ತಗೊಂಡು ಹೋಗಿ ಅಂತ ಹೇಳ್ತಾರೆ. ಇದನ್ನ ನೋಡಿ “ಯೆಹೋವನು ನನ್ನ ಪ್ರಾರ್ಥನೆ ಕೇಳಿ ನಂಗೆ ಉತ್ತರ ಕೊಟ್ಟನು ಅಂದ್ಮೇಲೆ ಬೇರೆಯವರ ಪ್ರಾರ್ಥನೆಗೂ ಖಂಡಿತ ಆತನು ಉತ್ತರ ಕೊಡ್ತಾನೆ ಅಂತ ನಾನು ಈಗ ನಂಬ್ತೀನಿ ಅಂತ ಲುಸೋ ಅವರ ಮೊಮ್ಮಗ ಹೇಳಿದ.”

ಪರಿಹಾರ ಕೆಲಸದಲ್ಲಿ ನಮ್ಮ ಸಹೋದರರು ಆಹಾರವನ್ನ ವಿತರಿಸಿದ್ರಿಂದ ಡೆಮೋಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೋನಲ್ಲಿರೋ ಮಕ್ಕಳು ಚಿತ್ರವನ್ನ ಬಿಡಿಸಿ ಥ್ಯಾಂಕ್ಯೂ ಹೇಳಿದ್ರು

 ಡೆಮೋಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೋನಲ್ಲಿ ಜೀವಿಸ್ತಿರೋ ಒಬ್ಬ ಸ್ತ್ರೀಯ ಮನೆ ಪಕ್ಕ ಸಾಕ್ಷಿ ಕುಟುಂಬ ಇತ್ತು. ಈ ಕುಟುಂಬಕ್ಕೆ ನಮ್ಮ ಸಹೋದರರು ಆಹಾರ ದಿನಸಿಯನ್ನ ಕೊಟ್ಟು ಸಹಾಯ ಮಾಡಿದ್ರು. ಇದನ್ನ ನೋಡಿದ ಆ ಸ್ತ್ರೀ ಹೀಗಂದಳು, “ಮಹಾಪಿಡುಗು ಮುಗಿದ ಮೇಲೆ ನಾನೂ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗ್ತೀನಿ. ಯಾಕಂದ್ರೆ ಅವರು ಕಷ್ಟಕಾಲದಲ್ಲಿ ತಮ್ಮ ಸಹೋದರ ಸಹೋದರಿಯರಿಗೆ ತುಂಬಾ ಕಾಳಜಿ ತೋರಿಸ್ತಾರೆ.” ಅವರು ಹೀಗೆ ಹೇಳಿದಾಗ ಸ್ತ್ರೀಯ ಗಂಡ, “ಒಂದು ಚೀಲ ಅಕ್ಕಿಗೋಸ್ಕರ ನೀನು ಯೆಹೋವನ ಸಾಕ್ಷಿ ಆಗ್ತೀಯ?” ಅಂತ ಕೇಳಿದ್ರು. ಅದಕ್ಕೆ ಅವಳು, “ಅದು ಬರಿ ಒಂದು ಚೀಲ ಅಕ್ಕಿ ಅಲ್ಲ ನಿಜವಾದ ಪ್ರೀತಿಯ ಪುರಾವೆಯಾಗಿದೆ” ಅಂತ ಆ ಸ್ತ್ರೀ ಹೇಳಿದಳು.

 ಈ ಮಹಾಪಿಡುಗಿನ ಸಮಯದಲ್ಲಿ ನೀವು ಧಾರಾಳವಾಗಿ ಕೊಟ್ಟ ಕಾಣಿಕೆಗಳಿಂದಾಗಿನೇ ನಮ್ಮ ಸಹೋದರ ಸಹೋದರಿಯರಿಗೆ ಬೇಗನೆ ಅವ್ರ ಅಗತ್ಯಗಳನ್ನ ಪೂರೈಸೋಕೆ ಯೆಹೋವನ ಸಾಕ್ಷಿಗಳಿಂದ ಸಾಧ್ಯವಾಗಿದೆ. donate.pr418.com ಮೂಲಕ ನೀವು ಕೊಟ್ಟಿರೋ ಕಾಣಿಕೆಗಳಿಗಾಗಿ ತುಂಬಾ ಧನ್ಯವಾದ.