ನಮ್ಮ ಕ್ರೈಸ್ತ ಜೀವನ
ಮೊದಲು ನಿಮ್ಮ ಸಹೋದರನೊಂದಿಗೆ ಸಮಾಧಾನ ಮಾಡಿಕೊಳ್ಳಿ
ಯೇಸುವಿನ ಸಮಯದಲ್ಲಿ ನೀವು ಗಲಿಲಾಯದಲ್ಲಿ ಜೀವಿಸುತ್ತಿದ್ದೀರಿ ಎಂದು ನೆನಸಿ. ಪರ್ಣಶಾಲೆಗಳ ಹಬ್ಬವನ್ನು ಆಚರಿಸಲು ಯೆರೂಸಲೇಮಿಗೆ ಬಂದಿದ್ದೀರಿ. ದೂರದೂರದಿಂದ ಬಂದಿರುವ ಜೊತೆ ಆರಾಧಕರಿಂದ ನಗರ ಕಿಕ್ಕಿರಿದು ತುಂಬಿದೆ. ನೀವು ಯೆಹೋವನಿಗೆ ಒಂದು ಕಾಣಿಕೆಯನ್ನು ಅರ್ಪಿಸಲು ಬಂದಿದ್ದೀರಿ. ಒಂದು ಆಡನ್ನು ಜನರಿಂದ ಗಿಜಿಗುಟ್ಟುತ್ತಿರುವ ನಗರದ ಬೀದಿಗಳಲ್ಲಿ ಎಳೆಯುತ್ತಾ ತುಂಬ ಕಷ್ಟಪಟ್ಟು ದೇವಾಲಯಕ್ಕೆ ಬಂದು ಮುಟ್ಟಿದ್ದೀರಿ. ಆಲಯದಲ್ಲಿ ನೋಡಿದರೆ ಅಲ್ಲೂ ಜನಜಂಗುಳಿ. ಯಜ್ಞ ಅರ್ಪಿಸಲು ಬಂದ ಜನರಿಂದ ಆಲಯ ತುಂಬಿಕೊಂಡಿದೆ. ಕಾದು ಕಾದು ಕೊನೆಗೆ ನೀವು ಯಜ್ಞವನ್ನು ಅರ್ಪಿಸುವ ಸರದಿ ಬಂತು. ಆಗ ನಿಮ್ಮ ಸಹೋದರನಿಗೆ ನಿಮ್ಮ ವಿರುದ್ಧ ಏನೋ ಅಸಮಾಧಾನವಿದೆ ಎಂದು ನಿಮಗೆ ನೆನಪಾಗುತ್ತದೆ. ಆ ಸಹೋದರ ಆ ಜನಜಂಗುಳಿಯಲ್ಲಿ ಎಲ್ಲಿದ್ದಾನೋ ಏನೋ. ಈಗ ನೀವೇನು ಮಾಡಬೇಕು? ಯೇಸು ಏನು ಹೇಳುತ್ತಾನೆಂದು ಗಮನಿಸಿ. (ಮತ್ತಾಯ 5:24 ಓದಿ.) ನೀವು ಮತ್ತು ಆ ಸಹೋದರ ಹೇಗೆ ಸಮಾಧಾನ ಮಾಡಿಕೊಳ್ಳಬಹುದು? ಕೆಳಗಿರುವ ಎರಡು ಚೌಕಗಳಲ್ಲಿ ನಿಮಗೆ ಯಾವುದು ಸರಿಯಾದ ಉತ್ತರ ಎಂದು ಅನಿಸುತ್ತದೋ ಅದಕ್ಕೆ ಗುರುತು ಹಾಕಿ.
ನೀವೇನು ಮಾಡಬೇಕು?
-
ನಿಮ್ಮ ಮೇಲೆ ಅಸಮಾಧಾನಗೊಳ್ಳಲು ನಿಮ್ಮ ಸಹೋದರನಿಗೆ ನಿಜವಾಗಲೂ ಕಾರಣ ಇದ್ದರೆ ಮಾತ್ರ ಮಾತಾಡಬೇಕು
-
ನಿಮ್ಮ ಸಹೋದರ ತುಂಬ ಸೂಕ್ಷ್ಮ ಎಂದು ಅನಿಸಿದರೆ ಅಥವಾ ಸಮಸ್ಯೆಗೆ ನೀವೂ ಕಾರಣ ಎಂದು ಹೇಳಿದರೆ ಅವನನ್ನು ತಿದ್ದಲು ಪ್ರಯತ್ನಿಸಬೇಕು
-
ನಿಮ್ಮ ಸಹೋದರ ಮಾತಾಡುವಾಗ ತಾಳ್ಮೆಯಿಂದ ಕೇಳಿ ಮತ್ತು ನಿಮಗೆ ಪೂರ್ತಿ ಅರ್ಥ ಆಗದಿದ್ದರೂ ಅವನ ಮನಸ್ಸಿಗಾಗಿರುವ ನೋವಿಗಾಗಿ ಅಥವಾ ನಿಮ್ಮ ನಡತೆಯಿಂದಾದ ಪರಿಣಾಮಗಳಿಗಾಗಿ ಹೃತ್ಪೂರ್ವಕವಾಗಿ ಕ್ಷಮೆ ಕೇಳಿ
ನಿಮ್ಮ ಸಹೋದರ ಏನು ಮಾಡಬೇಕು?
-
ನೀವು ಅವನಿಗೆ ಹೇಗೆ ನೋವು ಮಾಡಿದಿರಿ ಎಂದು ಸಭೆಯಲ್ಲಿರುವ ಬೇರೆಯವರಿಗೆ ಹೇಳಿ ಅವರ ಬೆಂಬಲ ಪಡೆದುಕೊಳ್ಳಬೇಕು
-
ನಿಮಗೆ ಕಿರಿಕಿರಿ ಉಂಟುಮಾಡಿ, ನಡೆದ ಸಂಗತಿಯ ಒಂದೊಂದು ಅಂಶವನ್ನೂ ಬಿಡಿಸಿ ಹೇಳಿ, ನೀವು ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಬೇಕು
-
ನೀವು ಧೈರ್ಯ ತಂದುಕೊಂಡು ಅವನ ಹತ್ತಿರ ಹೋಗಿ ದೀನತೆಯಿಂದ ಮಾತಾಡುತ್ತಿರುವುದನ್ನು ಅವನು ಗುರುತಿಸಿ ಹೃದಯದಾಳದಿಂದ ಧಾರಾಳವಾಗಿ ಕ್ಷಮಿಸಬೇಕು
ನಾವಿಂದು ಮಾಡುವ ಆರಾಧನೆಯಲ್ಲಿ ಪ್ರಾಣಿ ಯಜ್ಞಗಳನ್ನು ಅರ್ಪಿಸಬೇಕಾಗಿಲ್ಲವಾದರೂ ನಮ್ಮ ಸಹೋದರನೊಟ್ಟಿಗೆ ಸಮಾಧಾನ ಮಾಡಿಕೊಳ್ಳುವುದಕ್ಕೂ ದೇವರು ಒಪ್ಪುವ ಆರಾಧನೆಗೂ ಯಾವ ಸಂಬಂಧವಿದೆ ಎಂದು ಯೇಸು ಹೇಳಿದನು?