ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ದೇವರ ಮೇಲೆ ಮತ್ತು ನೆರೆಯವರ ಮೇಲೆ ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಬಹುದು?

ದೇವರ ಮೇಲೆ ಮತ್ತು ನೆರೆಯವರ ಮೇಲೆ ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಬಹುದು?

ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರವನ್ನು ಅನ್ವಯಿಸುವುದಿಲ್ಲವಾದರೂ ಅದರ ಅತಿ ಪ್ರಾಮುಖ್ಯವಾದ ಎರಡು ಆಜ್ಞೆಗಳನ್ನು ಪಾಲಿಸಬೇಕೆಂದು ಯೆಹೋವನು ಬಯಸುತ್ತಾನೆ. ದೇವರನ್ನು ಮತ್ತು ನೆರೆಯವರನ್ನು ಪ್ರೀತಿಸಬೇಕೆನ್ನುವುದೇ ಆ ಆಜ್ಞೆಗಳಾಗಿವೆ. (ಮತ್ತಾ 22:37-39) ಆ ಪ್ರೀತಿ ನಮಗೆ ಹುಟ್ಟಿನಿಂದಲೇ ಬರುವುದಿಲ್ಲ. ಅದನ್ನು ನಾವು ಬೆಳೆಸಿಕೊಳ್ಳಬೇಕು. ಹೇಗೆ? ಒಂದು ಪ್ರಾಮುಖ್ಯ ವಿಧಾನ ನಾವು ಪ್ರತಿದಿನ ಬೈಬಲನ್ನು ಅಧ್ಯಯನ ಮಾಡುವುದೇ ಆಗಿದೆ. ಬೈಬಲಿನಲ್ಲಿ ದೇವರ ವ್ಯಕ್ತಿತ್ವದ ವಿವಿಧ ಅಂಶಗಳನ್ನು ತಿಳಿಸಲಾಗಿದೆ. ಅವುಗಳನ್ನು ನಾವು ಓದುವಾಗ ‘ಆತನ ಪ್ರಸನ್ನತೆಯನ್ನು ನೋಡುತ್ತೇವೆ.’ (ಕೀರ್ತ 27:4) ಇದರಿಂದ ಯೆಹೋವನನ್ನು ನಾವು ಇನ್ನೂ ಹೆಚ್ಚು ಪ್ರೀತಿಸುತ್ತೇವೆ ಮತ್ತು ಆತನಂತೆಯೇ ಯೋಚಿಸಲು ಪ್ರಯತ್ನಿಸುತ್ತೇವೆ. ಆಗ ಇತರರಿಗೆ ಸ್ವತ್ಯಾಗದ ಪ್ರೀತಿ ತೋರಿಸಬೇಕು ಎಂಬ ಆಜ್ಞೆಯನ್ನು ಮತ್ತು ದೇವರು ಕೊಟ್ಟಿರುವ ಇನ್ನೂ ಬೇರೆ ಆಜ್ಞೆಗಳನ್ನು ಪಾಲಿಸಲು ನಮಗೆ ಪ್ರಚೋದನೆ ಸಿಗುತ್ತದೆ. (ಯೋಹಾ 13:34, 35; 1ಯೋಹಾ 5:3) ಬೈಬಲ್‌ ಅಧ್ಯಯನವನ್ನು ಆನಂದಿಸಲು ಮೂರು ಸಲಹೆಗಳನ್ನು ಕೆಳಗೆ ಕೊಡಲಾಗಿದೆ:

  • ನಿಮ್ಮ ಕಲ್ಪನಾಶಕ್ತಿಯನ್ನು ಉಪಯೋಗಿಸಿ, ಪೂರ್ತಿ ತಲ್ಲೀನರಾಗಿ. ಆ ವೃತ್ತಾಂತದಲ್ಲಿ ನೀವೂ ಇದ್ದೀರೆಂದು ಕಲ್ಪಿಸಿಕೊಳ್ಳಿ. ಆಗ ಆ ವೃತ್ತಾಂತ ನಿಮ್ಮ ಕಣ್ಮುಂದೆ ನಡೆಯುತ್ತಿರುವಂತೆ, ಅಲ್ಲಿರುವ ಸದ್ದು-ಗದ್ದಲ ಕೇಳಿಸುತ್ತಿರುವಂತೆ, ಪರಿಮಳವನ್ನು ಆನಂದಿಸುತ್ತಿರುವಂತೆ ನಿಮಗೆ ಅನಿಸುತ್ತದೆ. ಆ ವೃತ್ತಾಂತದಲ್ಲಿ ಬರುವ ವ್ಯಕ್ತಿಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಹ ಸಾಧ್ಯವಾಗುತ್ತದೆ.

  • ವಿವಿಧ ವಿಧಾನಗಳನ್ನು ಬಳಸಿ. ನೀವು ಈ ಕೆಲವು ವಿಧಾನಗಳನ್ನು ಬಳಸಬಹುದು: ಜೋರಾಗಿ ಓದಿ ಅಥವಾ ಆಡಿಯೋ ರೆಕಾರ್ಡಿಂಗನ್ನು ಕೇಳುತ್ತಾ ನಿಮ್ಮ ಬೈಬಲಿನಲ್ಲಿ ಅನುಸರಿಸಿ. ಅಧ್ಯಾಯಗಳನ್ನು ಒಂದೊಂದಾಗಿ ಓದುತ್ತಾ ಹೋಗುವ ಬದಲು ಬೈಬಲಿನಲ್ಲಿರುವ ಒಬ್ಬ ವ್ಯಕ್ತಿಯ ಬಗ್ಗೆ ಅಥವಾ ಒಂದು ವಿಷಯದ ಬಗ್ಗೆ ಓದಿ. ಉದಾಹರಣೆಗೆ, ಯೇಸು ಬಗ್ಗೆ ಓದುವಾಗ ಬೈಬಲಿನ ಅಧ್ಯಯನ ಕೈಪಿಡಿಯಲ್ಲಿರುವ 4​ನೇ ವಿಭಾಗ ಅಥವಾ 16​ನೇ ವಿಭಾಗದಲ್ಲಿರುವ ಮಾಹಿತಿಯನ್ನು ಉಪಯೋಗಿಸಿ. ದಿನದ ವಚನವನ್ನು ಯಾವ ಅಧ್ಯಾಯದಿಂದ ತೆಗೆಯಲಾಗಿದೆಯೋ ಆ ಅಧ್ಯಾಯವನ್ನು ಪೂರ್ತಿ ಓದಿ. ಬೈಬಲಿನ ಪುಸ್ತಕಗಳನ್ನು ಕಾಲಾನುಕ್ರಮವಾಗಿ ಓದಿ.

  • ಅರ್ಥಮಾಡಿಕೊಂಡು ಓದಿ. ಬೈಬಲನ್ನು ಓದಿ ಮುಗಿಸಬೇಕೆಂದು ಪ್ರತಿದಿನ ಅನೇಕ ಅಧ್ಯಾಯಗಳನ್ನು ಓದಬೇಡಿ. ಅದರ ಬದಲು ಒಂದೇ ಅಧ್ಯಾಯ ಓದಿದರೂ ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ, ಅದರ ಬಗ್ಗೆ ಧ್ಯಾನಿಸಿ. ಓದುವಾಗ ಅದರಲ್ಲಿರುವ ಸನ್ನಿವೇಶವನ್ನು ಗ್ರಹಿಸಿ, ವಿವರಗಳನ್ನು ಪರಿಶೀಲಿಸಿ. ನಕ್ಷೆಗಳನ್ನು, ಸಂಬಂಧಿಸಿದ ಇತರ ವಚನಗಳನ್ನು ನೋಡಿ. ನಿಮಗೆ ಅರ್ಥವಾಗದ ಒಂದು ಅಂಶದ ಬಗ್ಗೆಯಾದರೂ ಸಂಶೋಧನೆ ಮಾಡಿ. ಸಾಧ್ಯವಾದಲ್ಲಿ, ನೀವು ಓದಲು ಎಷ್ಟು ಸಮಯ ತೆಗೆದುಕೊಂಡಿರೋ ಅಷ್ಟೇ ಸಮಯವನ್ನು ಧ್ಯಾನಿಸಲೂ ತೆಗೆದುಕೊಳ್ಳಿ.